ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸರಿಸುಮಾರು 1 ಲಕ್ಷ ಮೌಲ್ಯದ 2 ಕೆಜಿ 700 ಗ್ರಾಂ ಗಾಂಜಾವನ್ನ ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಬಾಗೇಪಲ್ಲಿ ಪೊಲೀಸರು ವಡ್ರೇಪಾಳ್ಯದ ನಾರಾಯಣಪ್ಪ ಎಂಬಾತನನ್ನ ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಂಧ್ರದ ಪುಟ್ಟಪರ್ತಿಯಿಂದ ಗಾಂಜಾ ತಂದು ಇಲ್ಲಿ ಹೆದ್ದಾರಿಯಲ್ಲಿ ಬಂದು ಹೋಗುವವರಿಗೆ ಮಾರಾಟ ಮಾಡುತ್ತಿದ್ದಾಗಿ ಆರೋಪಿ ನಾರಾಯಣಪ್ಪ ಪೊಲೀಸರ ಬಳಿ ಹೇಳಿದ್ದಾನೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಯಾಂಡಲ್‍ವುಡ್ ಡ್ರಗ್ಸ್ ಧಂಧೆ ಪ್ರಕರಣದ ಸುದ್ದಿ ಮಾಡಿದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮಾದಕ ವಸ್ತುಗಳ ವಿರುದ್ಧ ಪೊಲೀಸರು ಸಮರ ಸಾರಿದ್ದು, ಒಂದು ವಾರದಲ್ಲಿ ಪೊಲೀಸರು ಪತ್ತೆ ಹಚ್ಚಿದ ಎರಡನೇ ಪ್ರಕರಣ ಇದಾಗಿದೆ. ಈಗಾಗಲೇ ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ಗಾಂಜಾ ಸಾಗಾಟ ಪತ್ತೆ ಹಚ್ಚಲು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.