– ಗೂಡು ಕಟ್ಟುವ ರೊಮ್ಯಾಂಟಿಕ್ ಕಥನ ಇಲ್ಲಿದೆ
ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಈಗ ಎಲ್ಲಿ ನೋಡಿದರು ಬಣ್ಣ ಬಣ್ಣ. ಹಸಿರು ಮೈಹೊದ್ದುಕೊಂಡ ದೃಶ್ಯ ಮಳೆಗಾಲದಲ್ಲೂ ಕೂಡ ಅಪರೂಪ. ಆದರೆ ನಗರದ ಐತಿಹಾಸಿಕ ಎರಡು ಸುತ್ತಿನ ಕೋಟೆ ಪಕ್ಷಿಧಾಮವಾಗಿ ಮಾರ್ಪಟ್ಟಿದೆ. ಹಕ್ಕಿಗಳ ಕಲರವ ಕಣ್ಮನ ಸೆಳೆಯುತ್ತಿದೆ. ಜಿಲ್ಲೆಯ ಕೆರೆಗಳಿಗೆ ಬೇಸಿಗೆಯಲ್ಲಿ ವಲಸೆ ಹಕ್ಕಿಗಳು ಸಾಮಾನ್ಯವಾಗಿ ಬರುತ್ತವೆ. ಆದರೆ ಈ ಬಾರಿ ಚಳಿಗಾಲದಲ್ಲಿ ಸ್ಥಳೀಯ ಹಕ್ಕಿಗಳ ಕಲರವವೇ ಜೋರಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣ ಬಳಿ ಕೋಟೆಯ ಕಂದಕ ಪ್ರದೇಶದಲ್ಲಿ ಗೀಜಗ ಹಕ್ಕಿಗಳು ಗೂಡಗಳನ್ನು ಕಟ್ಟಿ ಚಿಲಿಪಿಲಿಗುಟ್ಟುತ್ತಿವೆ.
Advertisement
ಕಂದಕದ ತುಂಬಾ ಚರಂಡಿ ನೀರು ಹರಿಯುತ್ತಿದ್ದರೂ ಹಕ್ಕಿಗಳಿಗೆ ಅದೇ ಆಸರೆಯಾಗಿದೆ. ಹಳದಿ ಬಣ್ಣದ ತಳಿಯ ಗೀಜಗ, ನೇಕಾರ ಹಕ್ಕಿ, ಬಯಾ ಹಕ್ಕಿಗಳು ನೋಡುಗರನ್ನು ಆಕರ್ಷಿಸುತ್ತಿವೆ. ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಗಂಡುಹಕ್ಕಿಗಳು ಗೂಡುಗಳನ್ನು ಕಟ್ಟಲು ಆರಂಭಿಸುತ್ತವೆ. ನೀರು ಹತ್ತಿರ ಇರಬೇಕು, ಸಾಕಷ್ಟು ಆಹಾರ ಸಿಗುತ್ತಿರಬೇಕು, ಇತರ ಪಕ್ಷಿ ಪ್ರಾಣಿಗಳಿಂದ ಅಪಾಯ ಇರಬಾರದು ಅಂತಹ ಸ್ಥಳ ಹುಡುಕಿ ಗೂಡು ಕಟ್ಟುವುದು ಗಿಜಗಹಕ್ಕಿಯ ಜಾಣತನ. ಹತ್ತಿ, ತೆಂಗಿನ ನಾರು, ಈಚಲು ನಾರು, ಭತ್ತದ ಹುಲ್ಲು ನಾರಿನಿಂದ ಗೂಡು ಕಟ್ಟುತ್ತವೆ. ಗಿಡದ ರೆಂಬೆ ಕೊಂಬೆಗಳ ತುದಿಯಲ್ಲಿ, ನೀರಿನ ಕಡೆ ಭಾಗಿದ ಕಡೆಗಳಲ್ಲಿ ಗೂಡುಗಳನ್ನ ಕಟ್ಟುತ್ತವೆ. ಶಂಕಾಕಾರದಲ್ಲಿ ಗೂಡು ಕಟ್ಟಿ ತುದಿಯಲ್ಲಿ ಬಾಲದ ರೀತಿಯಲ್ಲಿ ಗೂಡು ಹೆಣೆದಿರುತ್ತವೆ. ಬೇರೆ ಪಕ್ಷಿಗಳು ಗೂಡು ಪ್ರವೇಶಿಸುವುದನ್ನು ತಡೆಯಲು ಈ ರೀತಿ ಮಾಡಿರುತ್ತವೆ. ಸಾಮಾನ್ಯವಾಗಿ ಹಕ್ಕಿಗಳು ಸಂತಾನೋತ್ಪತ್ತಿ ಬಳಿಕ ಗೂಡು ಖಾಲಿ ಮಾಡುತ್ತವೆ ಆದರೆ ಈ ಬಾರಿ ಹಕ್ಕಿಗಳ ಕಲರವ ಮುಂದುವರಿದಿದೆ.
Advertisement
Advertisement
ಗೀಜಗ ಪಕ್ಷಿಗಳು ಗೂಡು ಕಟ್ಟುವುದು ಒಂದು ರೊಮ್ಯಾಂಟಿಕ್ ಕಥನ ಎಂದು ಪಕ್ಷಿ ಪ್ರೇಮಿ, ನಿವೃತ್ತ ಪ್ರಾಣಿಶಾಸ್ತ್ರ ಉಪನ್ಯಾಸಕ ಪ್ರೋ.ಶಾನು ಕುಮಾರ್ ಹೇಳಿದ್ದಾರೆ. ಗಂಡು ಹಕ್ಕಿ ಅರ್ಧದಷ್ಟು ಗೂಡುಕಟ್ಟಿ ಹೆಣ್ಣು ಹಕ್ಕಿಗಾಗಿ ಕಾಯುತ್ತಿರುತ್ತವಂತೆ. ಹೆಣ್ಣು ಹಕ್ಕಿ ಗೂಡನ್ನು ಪರಿಶೀಲಿಸಿ ಒಪ್ಪಿಗೆ ಕೊಟ್ಟರೆ ಗೂಡು ಕಟ್ಟುವುದನ್ನ ಗಂಡು ಹಕ್ಕಿ ಮುಂದುವರಿತ್ತದೆ. ಇಲ್ಲದಿದ್ದರೆ ಗಂಡು ಹಕ್ಕಿ ಗೂಡುಕಟ್ಟಲು ಮತ್ತೊಂದು ಸ್ಥಳವನ್ನ ಹುಡುಕುತ್ತದೆ. ಇನ್ನೂ ಕೆಲ ಗಂಡು ಹಕ್ಕಿ ಮೂರ್ನಾಲ್ಕು ಗೂಡುಗಳನ್ನು ಅರ್ಧಕ್ಕೆ ಹೆಣೆದಿರುತ್ತವೆ, ಹೆಣ್ಣು ಹಕ್ಕಿ ಆಯ್ಕೆಮಾಡುವ ಗೂಡನ್ನು ಒಟ್ಟಾಗಿ ಪೂರ್ಣ ಕಟ್ಟಿಕೊಳ್ಳುತ್ತವೆ. ಗೂಡು ಪೂರ್ಣಗೊಂಡ ನಂತರ ಸಂತಾನೋತ್ಪತ್ತಿ ಮಾಡುತ್ತವೆ. ಮಳೆ ನೀರು ಒಳಗೆ ಬರದಂತೆ ಗೂಡನ್ನ ಮಣ್ಣಿನಿಂದ ಮೆತ್ತಿ ಕಟ್ಟಿರುತ್ತವೆ. ಮಿಂಚು ಹುಳುಗಳನ್ನ ತಂದಿಟ್ಟುಕೊಂಡು ಬೆಳಕು ಮಾಡಿಕೊಳ್ಳುತ್ತವೆ. 18 ರಿಂದ 20 ದಿನದಲ್ಲಿ ಒಂದು ಗೂಡನ್ನ ಕಟ್ಟುತ್ತವೆ. ಸುಮಾರು ಐವತ್ತು ಸಾವಿರ ಹುಲ್ಲಿನ ಎಳೆಗಳಿಂದ ಗೂಡು ಕಟ್ಟಿಕೊಳ್ಳುತ್ತವೆ.
Advertisement
ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಗೂಡುಕಟ್ಟಲು ಗೀಜಗ ಹಕ್ಕಿಗಳು ಪ್ರಾರಂಭಿಸುತ್ತವೆ. ಮಳೆಗಾಲ ಮುಗಿದ ಬಳಿಕ ಗೂಡು ಬಿಡುತ್ತವೆ. ಈ ಬಾರಿ ಚಳಿಗಾಲದಲ್ಲೂ ರಾಯಚೂರಿನಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿದೆ.