ರಾಯಚೂರು: ವಿದ್ಯುತ್ ತಂತಿ ತಗುಲಿ ತಂದೆ- ಮಗ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ನಡೆದಿದೆ.
ಮಹೇಶ(46), ನವೀನ್(16) ಮೃತಪಟ್ಟ ದುರ್ದೈವಿಗಳು. ಇವರನ್ನು ಕಾಪಾಡಲು ಹೋದ ಇನ್ನೋರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಣಾಪಾಯದಿಂದ ಪಾರಾಗಿದ್ದಾನೆ. ನಿನ್ನೆಯಿಂದ ರಾಯಚೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ವಿದ್ಯುತ್ ತಂತಿ ಪರಿಶೀಲಿಸಲು ಹೋದಾಗ ಮಹೇಶ್ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ್ದಾನೆ.
ತಂದೆಗೆ ಏನಾಗಿದೆ ಎಂದು ನೋಡಲು ಹೋಗಿ ಮಗ ನವೀನ್ ಕೂಡ ಕೆಳಗೆ ಬಿದ್ದು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಸ್ಥಳೀಯರೊಬ್ಬರು ನವೀನ್ ನನ್ನ ರಕ್ಷಣೆಗೆ ಮುಂದಾದಾಗ ಅವರಿಗೂ ವಿದ್ಯುತ್ ಸ್ಪರ್ಶವಾಗಿದೆ. ಆದರೆ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿದ್ಯುತ್ ತಂತಿ ಹರಿದು ಬಿದ್ದ ಬಗ್ಗೆ ಸ್ಪಷ್ಟತೆಯಿಲ್ಲ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.