– ಎಪಿಎಂಸಿಯಲ್ಲಿ ಒದ್ದೆಯಾದ ಭತ್ತ, ಶೇಂಗಾ
– ರಾಜಕಾಲುವೆ ಅವ್ಯವಸ್ಥೆಯಿಂದ ಜನಜೀವನ ಅಸ್ತವ್ಯಸ್ತ
ರಾಯಚೂರು: ನಗರದಲ್ಲಿಂದು ಏಕಾಏಕಿ ಮೋಡ ಕವಿದು ಸುಮಾರು ಒಂದು ಗಂಟೆ ಕಾಲ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ನಗರದ ಹಲವೆಡೆ ದೇವಸ್ಥಾನ, ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಳೆಯಿಂದಾಗಿ ರೈತರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ ಮಾರಾಟಕ್ಕೆ ತಂದಿದ್ದ ಭತ್ತ, ಶೇಂಗಾ, ಈರುಳ್ಳಿ ನಷ್ಟವಾಗಿದೆ.
ನಗರದ ಸಿಯತಲಾಬ್ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ರಾಜಾಕಾಲುವೆಯಲ್ಲಿ ಹರಿಯಬೇಕಾದ ನೀರು ನುಗ್ಗಿ ಜನ ತೊಂದರೆಗೀಡಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರು ಪಾಲಾಗಿವೆ.
ಒಂದು ಗಂಟೆಕಾಲ ಸುರಿದು ಸುಮ್ಮನಾದ ಮಳೆ ಜನರನ್ನ ಸಂಕಷ್ಟಕ್ಕೀಡು ಮಾಡಿದೆ. ರಾಜಾ ಕಾಲುವೆಗಳು ತುಂಬಿ ರಸ್ತೆ, ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಜಿಲ್ಲಾಡಳಿತ, ನಗರಸಭೆ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶೌಚಾಲಯದಲ್ಲಿ ನವಜಾತ ಶಿಶು ಶವ – ಹೆತ್ತ ಅಮ್ಮನಿಂದಲೇ ಮರ್ಡರ್
ವಿವಿಧ ಜಿಲ್ಲೆ, ಆಂಧ್ರ, ತೆಲಂಗಾಣದಿಂದ ಭತ್ತ, ಶೇಂಗಾ, ಈರುಳ್ಳಿ ಮಾರಾಟ ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಂದಿರುವ ರೈತರು ಜೋರಾಗಿ ಸುರಿದ ಮಳೆಗೆ ಹೈರಾಣಾಗಿದ್ದಾರೆ. ಮಳೆಗೆ ಭತ್ತ, ಶೇಂಗಾ ಒದ್ದೆಯಾಗಿರುವುದರಿಂದ ರೈತರು ನಷ್ಟ ಅನುಭವಿಸುವ ಆತಂಕ ಎದುರಿಸುತ್ತಿದ್ದಾರೆ. ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ ಸಂತೋಷ ಕಾಮೇಗೌಡ ಮನೆಗಳಿಗೆ ನೀರು ನುಗ್ಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬೇರೆ ಬೇರೆಯವರ ಜೊತೆ ಮದ್ವೆಗೆ ಸಿದ್ಧತೆ – ಅವಳಿ ಸಹೋದರಿಯರು ಆತ್ಮಹತ್ಯೆ