ಐತಿಹಾಸಿಕ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದೆ. ದೇಶ ಸಂಭ್ರಮದಲ್ಲಿದೆ. ರಾಮ ಮಂದಿರ ನಿರ್ಮಾಣ ಟ್ರಸ್ಟಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಗುರುಗಳ ಕಾರ್ಯ ಸ್ಮರಿಸಿರುವ ಶ್ರೀಗಳು, ಧನ ಸಂಗ್ರಹಕ್ಕೆ ಕೊಂಕು ನುಡಿದವರ ವಿರುದ್ಧ ಕುಟುಕಿದ್ದಾರೆ. ಒಳ್ಳೆಯ ಕೆಲಸಕ್ಕೆ ವಿಘ್ನ ಸಾಮಾನ್ಯ ಎಂದು ಮಂದಿರ ವಿರೋಧಿಗಳ ಕಿವಿ ಹಿಂಡಿದ್ದಾರೆ. ರಾಮಮಂದಿರ ಮತ್ತು ಅಯೋಧ್ಯೆ ನಗರ ನಿರ್ಮಾಣದ ಕಲ್ಪನೆ ಬಿಚ್ಚಿಟ್ಟಿದ್ದಾರೆ. ಪೇಜಾವರ ಶ್ರೀಗಳ ಜೊತೆಗಿನ ಸಂದರ್ಶನ ಇಲ್ಲಿದೆ.
ಶತಮಾನದ ಕನಸು ಈಡೇರುತ್ತಿದೆ, ಸನ್ಯಾಸಿಯಾಗಿ ಏನನ್ನಿಸುತ್ತಿದೆ?
ಪ್ರಪಂಚದಾದ್ಯಂತ ಇರುವ ಭಗವದ್ಭಕ್ತರ, ಆಸ್ತಿಕರ, ರಾಮನ ಆರಾಧಕರ ಕನಸು ನನಸಾಗುತ್ತಿದೆ. ಇಷ್ಟು ವರ್ಷಗಳು ಕಾದ ನಮ್ಮ ಭಾವನೆಗಳು ತಣಿಯುವಂತಹ ಕಾಲ ಬಂದಿದೆ. ಯಾವತ್ತೋ ಅವಶ್ಯವಾಗಿ ಆಗಬೇಕಾದ ಕಾರ್ಯ ಇವತ್ತು ಆಗುತ್ತಿದೆ ಎಂದು ಸಂತುಷ್ಟರಾಗಿದ್ದೇವೆ.
ಶಿಲಾನ್ಯಾಸದಲ್ಲಿ ತಮ್ಮ ಭಾಗವಹಿಸುವಿಕೆ ಆಗುತ್ತಿಲ್ಲವಂತೆ?
ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಎನ್ನುವುದು ಬಹಳ ದೊಡ್ಡ ಕಾರ್ಯ. ಚಾತುರ್ಮಾಸ್ಯ ವ್ರತಾಚರಣೆ ಇರುವುದರಿಂದ ನಾವು ನೇರವಾಗಿ ಅಲ್ಲಿಗೆ ಹೋಗಿ ಶಿಲಾನ್ಯಾಸದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಶಿಲಾನ್ಯಾಸ ಕಾರ್ಯಕ್ರಮ ಸಾಂಗವಾಗಿ ನಿರ್ವಿಘ್ನವಾಗಿ ನಡೆಯಲಿ ಎಂದು ಇಲ್ಲಿಂದಲೇ ಪ್ರಾರ್ಥಿಸುತ್ತೇನೆ. ಮಂದಿರ ನಿರ್ಮಾಣದ ಕಾರ್ಯ ಶೀಘ್ರ ಆಗಲಿ. ಸಹಕಾರಗಳು ಜೊತೆಗೂಡಿ ಬರಲಿ ಎಂದು ಪ್ರಾರ್ಥಿಸುತ್ತೇವೆ. ಉಡುಪಿಯ ನೀಲಾವರ ಗೋಶಾಲೆ ಮತ್ತು ದೇಗುಲದ ಆವರಣದಲ್ಲಿ ಲಕ್ಷ ತುಳಸಿ ಅರ್ಚನೆಯನ್ನು ಶ್ರೀಕೃಷ್ಣ ಮತ್ತು ಶ್ರೀರಾಮನ ಮುಂಭಾಗದಲ್ಲಿ ನಡೆಸುವುದು ನಮ್ಮ ಇಚ್ಛೆ. ವಿಷ್ಣು ಸಹಸ್ರನಾಮದ ಪಾರಾಯಣ ಇತರ ಪೂಜೆ ಮಹಾ ಪೂಜೆಯನ್ನು ನೆರವೇರಿಸಲು ನಾವು ನಿರ್ಧರಿಸಿದ್ದೇವೆ.
ವಿಶ್ವೇಶತೀರ್ಥ ಶ್ರೀಗಳು ಇದ್ದಿದ್ದರೆ ಹೇಗಿರುತ್ತಿತ್ತು?
ಗುರುಗಳು ತನ್ನ ಇಡೀ ಸನ್ಯಾಸ ಜೀವನವನ್ನೇ ರಾಮ ಮಂದಿರ ನಿರ್ಮಾಣಕ್ಕಾಗಿ ಮುಡಿಪಾಗಿಟ್ಟವರು. ಮಂದಿರ ಆಗಬೇಕು ಎಂಬ ಆಸೆ ಇಟ್ಟುಕೊಂಡವರು. ಅದಕ್ಕೋಸ್ಕರ ಹಲವಾರು ದಶಕಗಳ ಕಾಲ ಹೋರಾಟ ಮಾಡಿದವರು. ರಾಮಮಂದಿರದ ಹೋರಾಟಕ್ಕೆ ಅವರು ಅವತಾರ ಎತ್ತಿದ್ದರು ಎನ್ನುವಷ್ಟು ವಿಶೇಷ ರೀತಿಯಲ್ಲಿ ನಮ್ಮ ಗುರುಗಳು ತೊಡಗಿಸಿಕೊಂಡಿದ್ದರು. ರಾಮ ಮಂದಿರದ ಬೀಗ ಮುದ್ರೆಯನ್ನು ತೆರೆಯುವ ಹಕ್ಕೊತ್ತಾಯವನ್ನು ಸಿದ್ಧಪಡಿಸಿದ್ದೇ ಉಡುಪಿಯ ಧರ್ಮ ಸಂಸತ್ತಿನಲ್ಲಿ. ವಿಶ್ವೇಶತೀರ್ಥ ಶ್ರೀಪಾದರ ವಿಶೇಷ ಮುತುವರ್ಜಿಯಲ್ಲಿ ಧರ್ಮ ಸಂಸತ್ತು ಉಡುಪಿಯ ನೆಲದಲ್ಲಿ ಸಾಂಗವಾಗಿ ನಡೆದಿದೆ. ಗುರುಗಳ ಸಂಕಲ್ಪ ಮತ್ತು ವಿಶೇಷ ಪ್ರಯತ್ನದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ.
ಅಯೋಧ್ಯೆಯಲ್ಲಿ ಏನೇನಿರುತ್ತೆ?
ಶ್ರೀರಾಮನಿಗೆ ಮಂದಿರ, ಶ್ರೀರಾಮನ ಭಕ್ತರಿಗೆ ಬೇಕಾದ ಎಲ್ಲ ವ್ಯವಸ್ಥೆಗಳು ಅಯೋಧ್ಯೆಯಲ್ಲಿ ಇರಲಿದೆ. ಮಂದಿರಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಬೇಕಾದ ಸೌಕರ್ಯಗಳು, ರಾಮನ ಚರಿತ್ರೆಯನ್ನು ವಿವರಿಸುವಂತಹ ವಿಶೇಷ ಭವನಗಳು, ರಾಮ ಮಂದಿರದ ಜೊತೆಗೆ ಅಯೋಧ್ಯ ನಗರದ ನಿರ್ಮಾಣ ಕೂಡ ಆಗಲಿದೆ.
ಧನ ಸಂಗ್ರಹ ವಿಚಾರ ಚರ್ಚೆಗೀಡಾಗಿದೆ?
ರಾಮ ಮಂದಿರಕ್ಕೆ ಯಾರು ಹಣ ಕೊಡಬೇಕು, ಯಾರು ಕೊಡಬಾರದು ಎಂಬುದನ್ನು ಭಕ್ತರೇ ತೀರ್ಮಾನಿಸಲಿ. ಹೊರಗಿನವರು ಅದಕ್ಕೆ ಬಾಯಿ ಹಾಕಿದರೆ ಏನೂ ಉಪಯೋಗ ಇಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಇಂತಿಷ್ಟೇ ಹಣ ಕೊಡಿ, ಕಡ್ಡಾಯವಾಗಿ ಕೊಡಲೇಬೇಕು ಎಂದು ನಾವು ನಿಯಮ ಮಾಡಿಲ್ಲ. ಮಂದಿರಕ್ಕೆ ಭಕ್ತರು ಕೊಡುವಾಗ ಯಾರು, ಯಾಕೆ ಸ್ವೀಕಾರ ಮಾಡದೇ ಸುಮ್ಮನಿರಬೇಕು? ರಾಮ ಮಂದಿರ ಅನ್ನುವಂಥದ್ದು ಒಬ್ಬರ ಸ್ವತ್ತಲ್ಲ. ಎಲ್ಲರ ಪಾಲು ಸೇರಿದರೆ ಅದು ರಾಮಮಂದಿರ.
ಪ್ರಧಾನಿ ಮೋದಿ ಪಾಲ್ಗೊಳ್ಳುವುದು, ನೇರಪ್ರಸಾರಕ್ಕೆ ವಿರೋಧ ವ್ಯಕ್ತವಾಗುತ್ತಿದೆ?
ಒಂದು ಒಳ್ಳೆಯ ಕೆಲಸ ಆಗುತ್ತದೆ ಎಂದರೆ ವಿರೋಧ ಸಾಮಾನ್ಯ. ಕೆಲವರು ಮಾಡಿದ ವಿರೋಧವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ರಾಮ ಮಂದಿರಕ್ಕೆ ಸರ್ವೋಚ್ಛ ನ್ಯಾಯಾಲಯವೇ ತೀರ್ಪು ಕೊಟ್ಟಿದೆ. ಅದನ್ನು ಮತ್ತೆ ವಿರೋಧಿಸುತ್ತಾರೆ ಎಂದರೆ ಇದಕ್ಕಿಂತ ಮೂರ್ಖತನ ಬೇರಿಲ್ಲ. ಇಂತಹ ಹೇಳಿಕೆಗಳನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಮ್ಮ ಕೆಲಸವನ್ನು ಮಾಡಿಕೊಂಡು ಮುಂದುವರಿಯುತ್ತೇವೆ.
ರಾಮಮಂದಿರ ನಿರ್ಮಾಣವಾದರೆ ಸಂತರ ದೊಡ್ಡ ಬೇಡಿಕೆ ಈಡೇರಿದಂತೆಯೇ?
ಈಗ ಆಗಿರುವ ಕಾರ್ಯ ಅತ್ಯಲ್ಪ. ಆಗಬೇಕಾದ ಕಾರ್ಯ ಬಹಳಷ್ಟಿವೆ. ಗೋ ಸೇವೆಯ ಕಾರ್ಯ ಇಡೀ ದೇಶಾದ್ಯಂತ ಆಗಬೇಕು. ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು. ಗೋವಿನ ಮೇಲಿನ ಅಪಚಾರವೂ ಕಡಿಮೆಯಾಗಬೇಕು. ಊರು, ಕೇರಿ, ಮನೆ, ಮಠ, ದೇವಸ್ಥಾನದಲ್ಲಿ ಪುಟ್ಟ ಗೋಶಾಲೆ ನಿರ್ಮಾಣ ಆಗಬೇಕು. ಊರಿಗೊಂದು ದೇವಾಲಯ ಎಷ್ಟು ಮುಖ್ಯವೋ ಊರಿಗೊಂದು ಗೋಶಾಲೆಯು ಅಷ್ಟೇ ಮುಖ್ಯ.