ಉಡುಪಿ: ನಟ ಅರ್ಜುನ್ ಸರ್ಜಾ ತಮಿಳುನಾಡಿನ ಚೆನ್ನೈನಲ್ಲಿ ರಾಮ ಮತ್ತು ಆಂಜನೇಯನ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಎರಡು ದಿನಗಳಿಂದ ನಡೆಯುತ್ತಿರುವ ದೇಗುಲದ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಪ್ರಕ್ರಿಯೆಯಲ್ಲಿ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದಾರೆ.
ಅಯೋಧ್ಯೆ ಪ್ರವಾಸದಲ್ಲಿದ್ದ ಪೇಜಾವರ ಶ್ರೀಗಳನ್ನು ಅರ್ಜುನ್ ಸರ್ಜಾ ತಮಿಳುನಾಡಿಗೆ ಕರೆಸಿ ದೇವರಿಗೆ ಕುಂಭಾಭಿಷೇಕ ಮಾಡಿಸಿದ್ದಾರೆ. ಎರಡು ದಿನಗಳ ಕಾಲ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ಅವಧೂತ ವಿನಯ್ ಗುರೂಜಿ ಕೂಡ ಪಾಲ್ಗೊಂಡಿದ್ದರು. ಪೇಜಾವರ ಸ್ವಾಮೀಜಿ ಭಗವಾನ್ ಆಂಜನೇಯ ದೇವರ ಬೃಹತ್ ವಿಗ್ರಹಕ್ಕೆ ಜೇನು, ತುಪ್ಪ ಸಕ್ಕರೆಯ, ಅಭಿಷೇಕವನ್ನು ಮಾಡಿಸಿ ಪ್ರಾರ್ಥನೆ ಜೊತೆ ಹೂವಿನ ಪಕಳಗಳ ಅಭಿಷೇಕಗೈದರು. ಇದನ್ನೂ ಓದಿ: ನನ್ನ ಕೋಳಿ ಬೇಕು – ಬಿಕ್ಕಿ ಬಿಕ್ಕಿ ಅತ್ತ ಕಂದ
ತಮಿಳುನಾಡಿನ ಚೆನ್ನೈನಲ್ಲಿ ಪೇಜಾವರ ಮಠದ ಶಾಖೆ ಇದೆ. ಮಧ್ವಮತದ ಸಾವಿರಾರು ಅನುಯಾಯಿಗಳು ಅಲ್ಲಿದ್ದಾರೆ. ಸರ್ಜಾ ಕುಟುಂಬ ವೃಂದಾವನಸ್ಥರಾದ ವಿಶ್ವೇಶತೀರ್ಥರ ಕಾಲದಿಂದಲೂ ಪೇಜಾವರ ಮಠದ ಜೊತೆ ಸಂಬಂಧ ಹೊಂದಿದೆ. ಈ ಸಂದರ್ಭ ಮಾತನಾಡಿದ ಅರ್ಜುನ್ ಸರ್ಜಾ, ದಶಕಗಳಿಂದ ಇದ್ದ ಇಚ್ಛೆ ಈಡೇರಿದೆ. ಭಗವಂತ ತನ್ನ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದ್ದಾನೆ. ಪೇಜಾವರಶ್ರೀಗಳು ಪ್ರತಿಷ್ಟಾಪನೆ ಸಂದರ್ಭದಲ್ಲಿ ಚಿತ್ತೈಸುತ್ತಾರೆ ಎಂದು ಅಂದುಕೊಂಡಿರಲಿಲ್ಲ ಬಹಳ ಖುಷಿಯಾಗಿದೆ ಎಂದರು.