– ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ನದಿಗಳು
ಚಿಕ್ಕಮಗಳೂರು/ಬೆಳಗಾವಿ: ಅನೇಕ ದಿನಗಳಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಅಧಿಕ ಮಳೆಯಿಂದ ಅನೇಕ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ಬೆಳಗಾವಿ ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಿಂದ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಖಾನಾಪುರ ತಾಲೂಕಿನ ಹಳ್ಳಗಳೆಲ್ಲವೂ ಭರ್ತಿಯಾಗಿವೆ. ಇದರಿಂದ ಹಳ್ಳಗಳೆಲ್ಲವೂ ತುಂಬಿ ಜಮೀನು ಜಲಾವೃತವಾಗಿವೆ. ನೂರಾರು ಎಕರೆಯಲ್ಲಿ ರೈತರು ಭತ್ತದ ನಾಟಿ ಮಾಡಿದ್ದರು. ಆದರೆ ಜಮೀನಿನಲ್ಲಿ ನೀರು ತುಂಬಿದ್ದರಿಂದ ಭತ್ತದ ಬೆಳೆ ನಾಶವಾಗಿದೆ. ಖಾನಾಪುರ ತಾಲೂಕಿನ ಅವರೊಳ್ಳಿ, ಕೊಡಚವಾಡ, ಚಿಕ್ಕದಿನಕೊಪ್ಪ, ಬಿಳಕಿ, ಕಗ್ಗಣಗಿ, ಹಿರೇಮುನವಳ್ಳಿ, ಚಿಕ್ಕಮುನವಳ್ಳಿಯಲ್ಲಿ ಅಪಾರ ಬೆಳೆ ಹಾನಿಯಾಗಿದೆ.
Advertisement
Advertisement
ಅಲ್ಲದೇ ಖಾನಾಪುರ ತಾಲೂಕಿನ ಹಲವಾರು ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಇದರಿಂದ ನಂದಿಹಳ್ಳಿ-ಖಾನಾಪುರ, ಬಡಾಲ ಅಂಕಲಗಿ-ನಂದಿಹಳ್ಳಿ ರಸ್ತೆ ಸಂಚಾರ ಸ್ಥಗಿತವಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಪರಿಣಾಮ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಉಂಟಾಗಿದೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಯ ಒಳಹರಿವು ಹೆಚ್ಚಳವಾಗಿದೆ.
Advertisement
Advertisement
ಮಲೆನಾಡನಲ್ಲೂ ಬಿರುಗಾಳಿ ಸಹಿತ ಮಳೆಗೆ ಜನರು ತತ್ತರಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮಗಳಾದ ಹ್ಯಾಂಡ್ ಪೋಸ್ಟ್, ಮುತ್ತಿಗೆಪುರ, ಅಣಜೂರಿನಲ್ಲಿ ಮರಗಳು ಉರುಳಿ ಬಿದ್ದಿವೆ. ಇತ್ತ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಲು ಒಂದು ಅಡಿಯಷ್ಟೆ ಬಾಕಿ ಇದೆ. ಸೇತುವೆ ಮುಳುಗಡೆಯಾದರೆ ಹೊರನಾಡು-ಕಳಸ ಸಂಪರ್ಕ ಕಡಿತವಾಗುತ್ತದೆ.
ಧಾರವಾಡದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆಗೆ ಧಾರವಾಡ ಸವದತ್ತಿ ರಸ್ತೆ ಕಡಿತವಾಗಿದೆ. ಹಾರೋ ಬೆಳವಡಿ ಬಳಿ ಇರುವ ಸೇತುವೆ ಬಂದ್ ಮಾಡಲಾಗಿದೆ. ಮಳೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ನೀರು ಬಂದಿದ್ದರಿಂದ ಸೇತುವೆ ಪಕ್ಕದ ತಾತ್ಕಾಲಿಕ ರಸ್ತೆ ಬಂದ್ ಮಾಡಲಾಗಿದೆ. ಕಳೆದ ವರ್ಷ ಮಳೆಗೆ ಸೇತುವೆ ಕೊಚ್ಚಿ ಹೋಗಿ ರಸ್ತೆ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಭಾರೀ ಮಳೆಗೆ ತಾತ್ಕಾಲಿಕ ರಸ್ತೆ ಕೂಡ ಕಡಿತವಾಗಿದೆ.
ಹುಬ್ಬಳ್ಳಿ, ಕೊಡಗು ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಬಿಟ್ಟು ಬಿಡದೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಹೊಸನಗರ, ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ.
ಇದರಿಂದ ಜನರು ಮನೆಯಿಂದ ಹೊರಬರಲಾಗದೇ ಕಷ್ಟ ಪಡುತ್ತಿದ್ದಾರೆ. ತೀರ್ಥಹಳ್ಳಿ, ಹೊಸನಗರ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಜೊತೆಗೆ ಅಪಾಯದ ಮಟ್ಟ ಮೀರಿ ನದಿಗಳು, ಹಳ್ಳ-ಕೊಳ್ಳಗಳು ಹರಿಯುತ್ತಿವೆ. ಜಿಲ್ಲೆಯ ತುಂಗಾ, ಭದ್ರಾ ಹಾಗೂ ಶರಾವತಿ ನದಿಗಳಲ್ಲಿ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.