ಮಂಗಳೂರು: ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಈಗ ತಾಲೂಕಿನಲ್ಲಿರುವ ಆಸ್ಪತ್ರೆಗಳಲ್ಲೂ ಕೊರೊನಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕ್ಷಯ ರೋಗ ಆಸ್ಪತ್ರೆಯನ್ನು ಕೋವಿಡ್ ಕೇಂದ್ರವನ್ನಾಗಿ ಪರಿವರ್ತನೆ ಮಾಡಲಾಗಿದೆ.
ಈ ಕೇಂದ್ರದಲ್ಲಿ ಕೊರೊನಾ ದೃಢಪಟ್ಟಿರುವ ಆದರೆ ರೋಗ ಲಕ್ಷಣವಿಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ರಾಜ್ಯದಲ್ಲಿಯೇ ಮೊದಲ ಪ್ರಯೋಗವಾಗಿ ಕೊರೊನಾ ದೃಢಪಟ್ಟಿರುವ ಆದರೆ ರೋಗ ಲಕ್ಷಣವಿಲ್ಲದ ಬಂಧುಗಳಿಗಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕ್ಷಯ ರೋಗ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಸಜ್ಜುಗೊಳಿಸಲಾಗಿದೆ.
ಇಂದು ಆರು ಜನ ಕೊರೊನ ಸೊಂಕಿತರನ್ನು ಈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರಿಗೆ ಮಾನಸಿಕ ಸ್ಥೈರ್ಯ ತುಂಬಿ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಆರೋಗ್ಯ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಕೊರೊನಾ ಸೋಂಕಿತ ರೋಗಲಕ್ಷಣ ರಹಿತ ಬಂಧುಗಳ ಕ್ವಾರಂಟೈನ್ ವ್ಯವಸ್ಥೆಯನ್ನೂ ಇಲ್ಲಿಯೇ ಮಾಡಲಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 38,843ಕ್ಕೆ ಏರಿಕೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 2,222 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರ ಬಿಟ್ಟರೆ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 760 ಮಂದಿ ಬಿಡುಗಡೆಯಾಗಿದ್ದು, 1,419 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 41 ಮಂದಿ ಮೃತಪಟ್ಟಿದ್ದಾರೆ. ಭಾನುವಾರ 196 ಮಂದಿಗೆ ಸೋಂಕು ಬಂದಿದ್ದು, 14 ಮಂದಿ ಬಿಡುಗಡೆಯಾಗಿ 5 ಮಂದಿ ಮೃತಪಟ್ಟಿದ್ದರು.