– ಅನ್‍ಲಾಕ್‍ಗೂ ಮುನ್ನವೇ ಬೆಂಗಳೂರಿಗೆ ಬಂದ್ರು ಲಕ್ಷಾಂತರ ಜನ!
– ಬೆಂಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಕಳ್ಳಾಟ
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ ಮೂರನೇ ಎರಡು ಭಾಗದಲ್ಲಿ ನಾಳೆಯಿಂದ ಅನ್‍ಲಾಕ್ ಪ್ರಕ್ರಿಯೆ ಶುರುವಾಗ್ತಿದೆ. ಪಾಸಿಟಿವಿಟಿ ಪ್ರಮಾಣವನ್ನು ಅಚ್ಚರಿಯ ರೀತಿಯಲ್ಲಿ ಇಳಿಸಿಕೊಂಡಿರುವ ಬೆಂಗಳೂರು ಕೂಡ ನಾಳೆಯಿಂದ ಹಾಫ್ ಲಾಕ್ ಆಗುತ್ತಿದೆ. ಬೆಳಗ್ಗೆ ಹತ್ತರ ಬದಲು ಮಧ್ಯಾಹ್ನ 2 ಗಂಟೆಯವರೆಗೂ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಅವಕಾಶ ಸಿಗುತ್ತಿದೆ. ಆದ್ರೆ ಇದಕ್ಕೂ ಮೊದಲೇ ಬೆಂಗಳೂರಲ್ಲಿ ಕೊರೋನಾ ಮಹಾಮಾರಿ ಮತ್ತೆ ಸ್ಫೋಟಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.
Advertisement
ಅನ್‍ಲಾಕ್ ಸುಳಿವು ಸಿಕ್ಕ ದಿನದಿಂದಲೇ ಹಳ್ಳಿಗಳಿಂದ ಬೆಂಗಳೂರಿಗೆ ಮರು ವಲಸೆ ದೊಡ್ಡ ಮಟ್ಟದಲ್ಲಿ ನಡೆದಿದೆ. ಕಳೆದೊಂದು ವಾರದಲ್ಲಿ ಲಕ್ಷಾಂತರ ಜನ ಗಂಟು ಮೂಟೆ ಸಮೇತ ಮತ್ತೆ ಬೆಂಗಳೂರಿಗೆ ದೌಡಾಯಸಿದ್ದಾರೆ. ಅಟೋ, ಕಾರು, ಮಿನಿ ಲಗ್ಗೇಜ್ ಆಟೋ, ಟ್ರ್ಯಾಕ್ಟರ್.. ಹೀಗೆ ಸಿಕ್ಕ ಸಿಕ್ಕ ವಾಹನಗಳಲ್ಲಿ ರಾಜಧಾನಿ ಸೇರಿಸಿಕೊಂಡಿದ್ದಾರೆ.
Advertisement
Advertisement
ಉತ್ತರ ಭಾರತ, ಈಶಾನ್ಯ ರಾಜ್ಯಗಳಿಂದ ಸಾವಿರಾರು ಮಂದಿ ರೈಲುಗಳ ಮೂಲಕ ಬೆಂಗಳೂರಿಗೆ ಧಾವಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಬೆಂಗಳೂರಿಗೆ ಇವರೆಲ್ಲಾ ಬರುವಾಗ ಯಾರಿಗೂ ಕೋವಿಡ್ ಟೆಸ್ಟ್ ನಡೆದಿಲ್ಲ. ರಸ್ತೆ ಬದಿಗಳಲ್ಲಿ ನಾಮ್ ಕೆ ವಾಸ್ತೆಗೆ ಎಂಬಂತೆ ಇದ್ದ ತಪಾಸಣಾ ಕೇಂದ್ರಗಳು ಕೂಡ ಬಂದ್ ಆಗಿವೆ. ಪೊಲೀಸರು ಕೂಡ ಕನಿಷ್ಠ ಪಕ್ಷ ವಾಹನ ತಪಾಸಣೆ ನಡೆಸಿಲ್ಲ. ಕೋವಿಡ್ ರಿಪೋರ್ಟ್ ಕೂಡ ಕೇಳ್ತಿಲ್ಲ. ಬಿಬಿಎಂಪಿಯವರು ಹಳ್ಳಿಗಳಿಂದ ಬಂದವರಿಗೆ ಕೋವಿಡ್ ಟೆಸ್ಟ್ ಮಾಡಿಲ್ಲ. ಹಳ್ಳಿಗಳಿಂದ ಬಂದವರು ಕ್ವಾರಂಟೇನ್ ಕೂಡ ಆಗ್ತಿಲ್ಲ. ಬದಲಾಗಿ ನೇರವಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಕೆಟ್ ವೇಗದಲ್ಲಿ ಹೇಗೆ ಸೋಂಕು ಇಳಿಯಿತೋ ಅದೇ ವೇಗದಲ್ಲಿ ಸೋಂಕು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ.
Advertisement
ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಬಿತ್ತರವಾಗುತ್ತಲೇ ಎಚ್ಚೆತ್ತ ಸಿಎಂ ಯಡಿಯೂರಪ್ಪ, ವಲಸೆ ಕಾರ್ಮಿಕರು, ಉದ್ಯೋಗಿಗಳಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಿ ಎಂದು ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಸಚಿವ ಸುಧಾಕರ್ ಸಹ ಸೋಂಕು ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿಗೆ ತುಂಬಾ ಜನರು ಬರುತ್ತಿದ್ದಾರೆ. ಟೆಸ್ಟಿಂಗ್ ಹೆಚ್ಚಳ ಮಾಡ್ತಿದ್ದೇವೆ.. ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ಸರ್ಕಾರ, ಬಿಬಿಎಂಪಿ ತಪ್ಪೇನು?
ಪಾಸಿಟಿವಿಟಿ ಕಡಿಮೆ.. ಸ್ಥಿರತೆ ಸಾಧಿಸುವ ಮುನ್ನವೇ ಆತುರವಾಗಿ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಅನ್‍ಲಾಕ್ ಘೋಷಣೆ ಮಾಡಿರೋದು. ಬೆಂಗಳೂರಿಗೆ ಬರುವವರಿಗೆ ಟೆಸ್ಟ್ ರಿಪೋರ್ಟ್ ಕಡ್ಡಾಯ ಮಾಡಲಿಲ್ಲ. ಬೆಂಗಳೂರು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಚೆಕ್‍ಪೋಸ್ಟ್ ಹಾಕಲಿಲ್ಲ. ಬೆಂಗಳೂರಿಗೆ ಮರು ವಲಸೆ ಬರುವವರಿಗೆ ಯಾವುದೇ ನಿಯಮ ರೂಪಿಸಲಿಲ್ಲ. ತಜ್ಞರ ಸಲಹೆ ಕಡೆಗಣಿಸಿ ಅಂತರ್ ಜಿಲ್ಲೆ ಓಡಾಟಕ್ಕೆ ಅನುಮತಿ ನೀಡಿದ್ದರಿಂದ ವಲಸೆ ಹೆಚ್ಚಾಗಿದೆ. ಈ ಎಲ್ಲಾ ಕಾರಣಗಳಿಂದ ಮತ್ತೆ ರಾಜಧಾನಿಯಲ್ಲಿ ಸೋಂಕು ಸ್ಫೋಟ ಸಾಧ್ಯತೆಗಳಿವೆ. ಇದನ್ನೂ ಓದಿ: ಹತ್ತೊಂಬತ್ತು ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ ಸಡಿಲ – ಏನಿರುತ್ತೆ? ಏನಿರಲ್ಲ?
ಸರ್ಕಾರ ಮುಂದಿರುವ ಆಯ್ಕೆಗಳೇನು?:
* ಬೆಂಗಳೂರಲ್ಲಿ ಟೆಸ್ಟಿಂಗ್ ಹೆಚ್ಚಳ ಮಾಡಬೇಕು
* ಪ್ರತ್ಯೇಕ ಟೀಂ ಮೂಲಕ ಟ್ರೇಸ್, ಟೆಸ್ಟ್, ಟ್ರೀಟ್ಮೆಂಟ್..!
* ಮನೆ ಮನೆ ಆರೋಗ್ಯ ಸರ್ವೇ ನಡೆಸಬೇಕು
* ವಾಹನ ಸಂಚಾರ ಹೆಚ್ಚಿರುವ ಕಡೆ ರ್ಯಾಂಡಮ್ ಟೆಸ್ಟ್
* ಕೋವಿಡ್ ವ್ಯಾಕ್ಸಿನೇಷನ್‍ಗೆ ಹೆಚ್ಚು ಒತ್ತು ಕೊಡುವುದು
ನಾಳೆಯಿಂದ ಬೆಂಗಳೂರು ಅನ್‍ಲಾಕ್ ಆಗ್ತಿದೆ. ಆದರೆ, ಅನ್‍ಲಾಕ್‍ಗೂ ಮುನ್ನವೇ ಜನರೇ ಅನ್‍ಲಾಕ್ ಮಾಡಿಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ಊರು ಸೇರಿದ್ದವರೆಲ್ಲ ಗಂಟುಮೂಟೆ, ಕುಟುಂಬ ಸಮೇತ ಮತ್ತೆ ಬೆಂಗಳೂರು ಗೂಡು ಸೇರುತ್ತಿದ್ದಾರೆ. ಇವತ್ತು ಇಡೀ ದಿನ ಬೆಂಗಳೂರು ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಬೆಂಗಳೂರಲ್ಲಿ ಕೊರೊನಾ ಪೀಕ್‍ಗೆ ಹೋದಾಗ ಜೀವ ಉಳಿದರೆ ಸಾಕು ಎಂದು ಊರುಗಳಿಗೆ ಹೋಗಿದ್ದ ಜನರು ಈಗ ಮತ್ತೆ ಜೀವ ಕಟ್ಟಿಕೊಳ್ಳಲು ಬೆಂಗಳೂರು ಸೇರುತ್ತಿದ್ದಾರೆ. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅನ್‍ಲಾಕ್‍ಗೂ ಮುನ್ನವೇ ಜನರು ಲಗೇಜ್ ಸಮೇತ ವಾಪಾಸಾಗುತ್ತಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಜೂ.21 ರವರೆಗೆ ಲಾಕ್‍ಡೌನ್ ಮುಂದುವರಿಕೆ: ಸಚಿವ ಕೆ.ಎಸ್.ಈಶ್ವರಪ್ಪ
ಬೆಂಗಳೂರಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ಸೋಂಕು ಇಳಿದಿದೆ. ಇಳಿಯುತ್ತಿದೆ ಕೂಡ. ಹೆಲ್ತ್ ಬುಲೆಟಿನ್ ನೋಡಿದ್ರೆ ಇದು ಗೊತಾಗುತ್ತಲ್ವಾ ಅಂತಾ ನೀವು ಅಂದ್ಕೋಬಹುದು. ಆದ್ರೆ ಇದರ ಅಸಲಿಯತ್ತು ಬೇರೇನೆ ಇದೆ.. ರಾಜ್ಯದ ವಿವಿಧೆಡೆಗಳಿಂದ ಕಾರ್ಮಿಕರು ಬೆಂಗಳೂರಿಗೆ ಮತ್ತೆ ಬರ್ತಿರೋ ಬಗ್ಗೆ ಕಳೆದ ವಾರ ಪ್ರತಿಕ್ರಿಯಿಸಿದ್ದ ಸಿಎಂ ಯಡಿಯೂರಪ್ಪ, ಅವರನ್ನು ಬರ್ಬೇಡಿ ಅಂತಾ ಹೇಳೋಕೆ ಆಗಲ್ಲ. ಕಂಪನಿಗಳಲ್ಲಿ ಕೋವಿಡ್ ಟೆಸ್ಟ್ ಮಾಡಿಸೋದಾಗಿ ಹೇಳಿದ್ರು. ಆದ್ರೆ ಕಳೆದ ಒಂದು ವಾರದಲ್ಲಿ ಬೆಂಗಳೂರಲ್ಲಿ ನಡೆದ ಕೋವಿಡ್ ಟೆಸ್ಟ್ ಗಳ ಸಂಖ್ಯೆ ಮೇಲೆ ಕಣ್ಣಾಡಿಸಿದ್ರೆ, ಸಿಎಂ ಮಾತು ಮಾತಾಗಿಯೇ ಉಳಿದಿದೆ ಅನ್ನೋದು ಗೊತ್ತಾಗುತ್ತೆ. ಕೋವಿಡ್ ಟೆಸ್ಟ್ ಹೆಚ್ಚಾಗುವ ಬದಲು ಕ್ರಮೇಣ ಇಳಿಕೆ ಆಗುತ್ತಾ ಬರುತ್ತಿದೆ. ಹೀಗಾಗಿಯೇ ಬೆಂಗಳೂರಲ್ಲಿ ಕಡಿಮೆ ಕೇಸ್ ಬರುತ್ತಿವೆಯಾ ಎಂಬ ಪ್ರಶ್ನೆ ಎದುರಾಗಿದೆ. ಜೊತೆಗೆ ಟೆಸ್ಟಿಂಗ್ ಕಳ್ಳಾಟ ಮುಂದುವರೆದಿದ್ಯಾ ಎಂಬ ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ: ನಾಳೆಯಿಂದ ಅನ್‍ಲಾಕ್ – ಗಂಟು, ಮೂಟೆ ಹೊತ್ತು ಕುಟುಂಬ ಸಮೇತ ಬೆಂಗಳೂರಿನತ್ತ ಜನ