ರಾಜಕೀಯ ಉದ್ದೇಶಕ್ಕಾಗಿ ಸಿಬಿಐ ಬಳಸಿಕೊಂಡಿದ್ದನ್ನು ಕಾಂಗ್ರೆಸ್ ಒಪ್ಪಿಕೊಂಡಂತಾಗಿದೆ: ನಳಿನ್

Public TV
3 Min Read
nalin

ಬೆಂಗಳೂರು: ಕಾಂಗ್ರೆಸ್ ಸಿಬಿಐ ಸಂಸ್ಥೆಯನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ಬಳಸುತ್ತಿತ್ತು ಎನ್ನುವುದನ್ನು ಅವರೇ ಒಪ್ಪಿಕೊಂಡಂತಾಗಿದೆ ಎಂದು ಡಿಕೆಶಿ ವಿಚಾರವಾಗಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸಿಬಿಐ ಯಾವುದೇ ದಾಳಿ ಮಾಡುವ ಮೊದಲು ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುತ್ತದೆ. 70 ವರ್ಷ ಆಳಿದ ಕಾಂಗ್ರೆಸ್ಸಿಗೆ ಅದು ಗೊತ್ತಿಲ್ಲ ಎಂದರೆ ಇಷ್ಟು ವರ್ಷ ಸಿಬಿಐ ಅನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ಕಾಂಗ್ರೆಸ್ ಬಳಸುತ್ತಿತ್ತು ಎನ್ನುವುದನ್ನು ಅವರೇ ಒಪ್ಪಿಕೊಂಡಂತೆ ಆಗಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ರತಿಭಟನೆಗೆ ಟಾಂಗ್ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಮೇಲೆ ಈಡಿ, ಐಟಿ ಸ್ವಾಯತ್ತ ಸಂಸ್ಥೆಗಳು ಈಗಾಗಲೇ ತನಿಖೆ ಮಾಡುತ್ತಿದ್ದು, ಅದು ವಿವಿಧ ಹಂತಗಳಲ್ಲಿ ವಿಚಾರಣೆಯಲ್ಲಿದೆ. ಹೀಗಿರುವಾಗ ಸಿಬಿಐ ತನ್ನ ಕೆಲಸ ಮಾಡುತ್ತಿದ್ದು, ಅದಕ್ಕೆ ಸಹಕಾರ ನೀಡುವ ಬದಲು ಸಿಬಿಐ ಅಧಿಕಾರಿಗಳ ವಾಹನಗಳ ಮೇಲೆ ಬೆಂಬಲಿಗರನ್ನು ಬಿಟ್ಟು ದಾಳಿ ಮಾಡಿದ್ದು ಸರಿಯಾ ಎಂದು ಮತ್ತೊಂದು ಟ್ವೀಟ್‍ನಲ್ಲಿ ಅವರು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ, ಇದಕ್ಕೆ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು ಕುಮ್ಮಕ್ಕು ನೀಡುತ್ತಿರುವುದು, ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆಗೆ ಬೆಂಬಲ ಇದೆ ಎಂದು ಸಾಬೀತುಪಡಿಸಿದಂತೆ ಆಗಿದೆ. ಡಿಕೆಶಿ ಅಕ್ರಮ ಹಣ ಗಳಿಕೆಯಲ್ಲಿ ಕಾಂಗ್ರೆಸ್ ನಾಯಕರಿಗೂ ಪಾಲು ಇದೆ ಎಂದು ತೋರಿಸಿದಂತೆ ಆಗಿದೆ ಎಂದು ಹರಿಹಾಯ್ದಿದ್ದಾರೆ.

ಇದಕ್ಕೂ ಮುಂಚೆ ಟ್ವೀಟ್ ಮೂಲಕವೇ ಟಾಂಗ್ ನೀಡಿದ್ದ ಪ್ರವಾಸೋದ್ಯಮ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಭಂಡತನಕ್ಕೆ ಕೊನೆಯುಂಟೆ? ಮಾಡಿದ್ದುಣ್ಣೋ ಮಹಾರಾಯ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ಹೇಳಿದ್ದರು.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಆಪ್ತರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ್ದು, ಶೋಧ ಕಾರ್ಯ ಚುರುಕುಗೊಳಿಸಿದೆ. ಇತ್ತ ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ಪ್ರೇರಿತ ದಾಳಿಯಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ನಿವಾಸದ ಬಳಿಯೂ ಕೈ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಸಿಬಿಐ ದಾಳಿ ವೇಳೆ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸಿಕ್ಕ 50 ಲಕ್ಷ ರೂ. ಹಣವನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಿ.ಟಿ ರವಿ ಅವರು ಹೆಸರು ಹೇಳದೇ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

vlcsnap 2020 10 05 12h50m16s163 e1601883018508

ಇಂಧನ ಇಲಾಖೆಯಲ್ಲಿರುವಾಗ ಡಿಕೆಶಿಯವರ ಒಟ್ಟು 60 ಕೋಟಿ ಅಕ್ರಮ ಹಣದ ವಹಿವಾಟಿನ ಬಗ್ಗೆ ಇಡಿ ಹಾಗೂ ಐಟಿ ಲೆಕ್ಕ ಹಾಕಿದೆ. ವಿದ್ಯುತ್ ಇಲಾಖೆಯಲ್ಲಿ ಏಜೆನ್ಸಿ ಮೂಲಕ ಭಾರೀ ಅಕ್ರಮ ಹಣ ವಹಿವಾಟಿನ ಆರೋಪ ಇದ್ದು, ಇದಕ್ಕೆ ಪೂರಕ ಸಾಕ್ಷಿಯನ್ನು ಇಡಿ ಹಾಗೂ ಐಟಿ ಇಲಾಖೆ ಕಲೆ ಹಾಕಿವೆ. ಅದರ ಆಧಾರದ ಮೇಲೆ ಇಂದು ಸಿಬಿಐ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *