ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿಯಾಗಿದ್ದಾರೆ.
ಸಿಎಂ ಯಡಿಯೂರಪ್ಪ ಭೇಟಿಗೆ ಗೃಹ ಕಚೇರಿ ಕೃಷ್ಣಾಗೆ ಕುಮಾರಸ್ವಾಮಿ ಬಂದಿದ್ದರು. ಈ ಮೂಲಕ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಭೇಟಿ ಕುತೂಹಲ ಮೂಡಿಸಿದೆ. ಇದೇ ಮೊದಲ ಬಾರಿಗೆ ಸಿಎಂ ಭೇಟಿಗಾಗಿ ಹೆಚ್‍ಡಿಕೆ ಕೃಷ್ಣಾಗೆ ಬಂದಿರುವುದು. ಸಿಎಂ ಯಡಿಯೂರಪ್ಪ ಎಲ್ಲರನ್ನೂ ಹೊರಗೆ ಕಳುಹಿಸಿ ಸುಮಾರು 20 ರಿಂದ 25 ನಿಮಿಷಗಳ ಕಾಲ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ, ಕಳೆದ ಕೆಲವು ದಿನಗಳಿಂದ ಮಳೆಯಿಂದಾಗಿ ಹೆಚ್ಚು ಹಾನಿ ಉಂಟಾಗುತ್ತಿದೆ. ವಿಶೇಷವಾಗಿ ನಮ್ಮ ದಾಸರಹಳ್ಳಿ ಶಾಸಕ ಮಂಜುನಾಥ್ ಕ್ಷೇತ್ರದಲ್ಲಿ ಬಹಳ ಹಾನಿ ಆಗಿತ್ತು. ನಾನು ಸಿಎಂ ಆಗಿದ್ದಾಗ ಅನುದಾನ ಕೊಟ್ಟಿದ್ದೆ. ಅದು ಬಿಡುಗಡೆ ಆಗಿರಲಿಲ್ಲ. ಅದರ ಬಗ್ಗೆ ಮನವಿ ಮಾಡಲು ಬಂದಿದ್ದೆ ಎಂದು ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಡ್ರಗ್ಸ್ ಬಿಚಾರ ಕೂಡ ಹೆಚ್ಚು ಸದ್ದು ಮಾಡುತ್ತಿದೆ. ತನಿಖೆ ನಡೆಯುತ್ತಿದೆ ಅಂತ ಸಿಎಂ ಹೇಳಿದ್ದಾರೆ. ಬೇರೆ ಬೇರೆ ಕ್ಷೇತ್ರದವರು ಈ ಡ್ರಗ್ಸ್ ಜಾಲದಲ್ಲಿ ಇರಬಹುದು. ಯಾರೇ ಈ ಜಾಲದಲ್ಲಿ ಇದ್ದರೂ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಯಾವುದೇ ಕಾರಣಕ್ಕೂ ತನಿಖೆ ಹಾದಿ ತಪ್ಪಬಾರದು. ಯಾರೇ ಇದ್ದರೂ ಕ್ರಮ ಕೈಗೊಳ್ಳಿ ಎಂದು ಸಿಎಂ ಯಡಿಯೂರಪ್ಪ ಅವರ ಬಳಿ ಹೆಚ್‍ಡಿಕೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.