– ಹೈಕೋರ್ಟ್ ಚಾಟಿಯಿಂದ ಎಚ್ಚೆತ್ತ ಬಿಬಿಎಂಪಿ
– ಅಪಘಾತವಾದ 1 ತಿಂಗಳ ಒಳಗಡೆ ಅರ್ಜಿ ಸಲ್ಲಿಕೆ ಕಡ್ಡಾಯ
ಬೆಂಗಳೂರು: ಹೆಲ್ಮೆಟ್ ಹಾಕಿಲ್ಲದಿಂದರೆ ದಂಡ. ಮಾಸ್ಕ್ ಹಾಕದಿದ್ದರೆ ಫೈನ್. ಆದರೆ ರಸ್ತೆ ಸರಿ ಮಾಡದ ಬಿಬಿಎಂಪಿಗೆ ಏನು ದಂಡ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕರ್ನಾಟಕ ಹೈಕೋರ್ಟ್ ಚಾಟಿ ಏಟಿಗೆ ಕೊನೆಗೂ ಎಚ್ಚೆತ್ತ ಬಿಬಿಎಂಪಿ ರಸ್ತೆ ಗುಂಡಿಯಿಂದ ಆಗುವ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಿದೆ. ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೆ ಒಳಗಾದವರಿಗೆ ಪರಿಹಾರ ಪಡೆಯಲು ಬಿಬಿಎಂಪಿಯಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ.
Advertisement
ಫುಟ್‌ಪಾತ್ ಗಳ ಎಡವಟ್ಟಿನಿಂದ ಗಾಯ, ರಸ್ತೆಗುಂಡಿಯಿಂದಾಗಿ ಆಗುವ ಅಪಘಾತದಲ್ಲಿ ಗಾಯ/ ಸಾವಿಗೀಡಾದವರಿಗೆ ಪರಿಹಾರ ಸಿಗಲಿದೆ.
Advertisement
Advertisement
ಪರಿಹಾರ ಹೇಗೆ ಸಿಗಲಿದೆ?
ಸಂತ್ರಸ್ತರು ಪೊಲೀಸ್ ದೂರಿನೊಂದಿಗೆ ಬಿಬಿಎಂಪಿ ವಲಯ ಆಯುಕ್ತರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಾಕ್ಷಿಗಳಾಗಿ ಪೊಲೀಸ್ ದೂರು, ಪ್ರತ್ಯಕ್ಷದರ್ಶಿಯ ಹೇಳಿಕೆ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಗಣಿಸಿ ಪರಿಹಾರ ನೀಡಲಾಗುತ್ತದೆ. ಅಪಘಾತವಾದ ದಿನದಿಂದ 30 ದಿನಗಳ ಒಳಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.
Advertisement
ಎಷ್ಟು ಪರಿಹಾರ?
ಕೆಟ್ಟ ರಸ್ತೆ ಅಥವಾ ಗುಂಡಿಗೆ ಬಿದ್ದು ಅಪಘಾತಗೊಂಡರೆ ಗರಿಷ್ಟ 15 ಸಾವಿರ, ಮೃತಪಟ್ಟರೆ 3 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಲಿದೆ. ಸಣ್ಣ ಪ್ರಮಾಣದ ಗಾಯಕ್ಕೆ 5 ಸಾವಿರ ರೂ., ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ 10 ಸಾವಿರ ರೂ. ಸಿಗಲಿದೆ.
ತಿರಸ್ಕರಿಸಬಹುದು:
1 ತಿಂಗಳ ಒಳಗಡೆ ಅರ್ಜಿ ಸಲ್ಲಸದೇ ಇದ್ದರೆ, ಸರಿಯಾದ ದಾಖಲೆಗಳು ಇರದಿದ್ದರೆ ತಿರಸ್ಕರಿಸಬಹುದು. ರಸ್ತೆ ಗುಣಮಟ್ಟದ ಬಗ್ಗೆ ಎಚ್ಚರಿಕೆ ಫಲಕ ಹಾಕಿದ್ದರೂ ಆ ಜಾಗದಲ್ಲಿ ಅಪಘಾತ ಸಂಭವಿಸಿದರೆ ಪರಿಹಾರದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಕೋರ್ಟ್ ಏನು ಹೇಳಿತ್ತು?
ಕೋರಮಂಗಲದ ನಿವಾಸಿ ವಿಜಯನ್ ಮೆನನ್ 2015ರಲ್ಲಿ ರಸ್ತೆ ಗುಂಡಿಗಳ ದುಸ್ಥಿತಿ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಈ ವರ್ಷದ ಫೆಬ್ರವರಿಯಲ್ಲಿ ಸಿಜೆ ಎ.ಎಸ್. ಓಕ್ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯಪೀಠದಲ್ಲಿ ನಡೆದಿತ್ತು.
ಈ ವೇಳೆ ರಸ್ತೆಗುಂಡಿಯಿಂದ ಸಂಭವಿಸುವ ಅಪಘಾತ ಹಾಗೂ ಸಾವು ನೋವಿಗೆ ಪರಿಹಾರ ನೀಡುವ ಕುರಿತಂತೆ ಕೋರ್ಟ್ ಆದೇಶವನ್ನು ಪಾಲಿಸದ್ದಕ್ಕೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಬಿಬಿಎಂಪಿಯ ಮಾಜಿ ಆಯಕ್ತ ಬಿ.ಎಚ್.ಅನಿಲ್‌ಕುಮಾರ್‌ಗೆ ಬೆವರಿಳಿಸಿದ ಹೈಕೋರ್ಟ್ ಬೇಷರತ್ ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು.