ಹುಬ್ಬಳ್ಳಿ: ರಸ್ತೆ ಕ್ರಾಸ್ ಮಾಡುವಾಗ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಕ್ರದಲ್ಲಿ ಸಿಲುಕಿಕೊಂಡು ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ನವನಗರದ ಆರ್ ಟಿಓ ಕಚೇರಿಯ ಕ್ರಾಸಿಂಗ್ ಬಳಿ ನಡೆದಿದೆ.
ಅಮರನಗರದ ಮಹೇಶ ಹೊಸಮನಿ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಆರ್‍ಟಿಎಸ್ ಚಿಗರಿ ಬಸ್ ಚಾಲಕರು, ಕ್ರಾಸಿಂಗ್ ಇರುವ ಸ್ಥಳದಲ್ಲಿ ವೇಗವಾಗಿ ವಾಹನ ಚಾಲನೆ ಮಾಡಿದ ಪರಿಣಾಮ ಈ ಘಟನೆ ನಡೆದಿದೆ.
ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಬಸ್ ಚಾಲಕ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬೈಕ್ ಬಸ್ಸಿನ ಚಕ್ರದ ಕೆಳಗಡೆ ಸಿಕ್ಕಿಕೊಂಡಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹೇಶನನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬಿಆರ್‍ಟಿಎಸ್ ಬಸ್ ಕಾರಿಡಾರ್ ಮಾರ್ಗವನ್ನ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ಇದ್ರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬಸ್ ಚಾಲಕರು ಅತಿ ವೇಗವಾಗಿ ಬಸ್ ಓಡಿಸುವುದು ಹಾಗೂ ಮಾರ್ಗದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.