– ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವೈದ್ಯ ಸಾವು
ಚಿಕ್ಕಮಗಳೂರು: ಅಪಘಾತದಿಂದ ರಸ್ತೆ ಬದಿಯಲ್ಲೇ ವೈದ್ಯರೊಬ್ಬರು ನರಳಾಡಿದರೂ ಕಾರಿನಿಂದ ಕೆಳಗಿಳಿಯದೆ ಬಿಜೆಪಿ ಶಾಸಕರೊಬ್ಬರು ಅಮಾನವೀಯತೆ ತೋರಿದ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರಿಂದ ವೈದ್ಯ ಡಾ. ರಮೇಶ್ ಪ್ರಾಣಬಿಟ್ಟಿದ್ದಾರೆ. ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಈ ವೇಳೆ ಶಾಸಕ ಡಿ ಎಸ್ ಸುರೇಶ್ ಅವರು ಅದೇ ದಾರಿಯಲ್ಲಿ ಲಕ್ಕವಳ್ಳಿಯಿಂದ ತರೀಕೆರೆಗೆ ಬರ್ತಿದ್ದರು. ಅಪಘಾತ ಕಂಡ ಶಾಸಕರು, ಇನ್ನೋವಾ ಕಾರಿನಲ್ಲೇ ಕೂತು ನೋಡಿದ್ದಾರೆ. ಬಳಿಕ ಶಾಸಕರ ಗನ್‍ಮ್ಯಾನ್ ಅಂಬುಲೆನ್ಸ್ ಕರೆ ಮಾಡಿದ್ದಾರೆ. ಅಂಬುಲೆನ್ಸ್ ಬರೋವರೆಗೂ ಶಾಸಕರು ಮಾತ್ರ ಕಾರಿನಲ್ಲೇ ಕುಳಿತಿದ್ದು, ವೈದ್ಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಉಡಾಫೆ ತೋರಿದ್ದಾರೆ.
ಘಟನೆ ನಡೆದು 20 ನಿಮಿಷದ ಬಳಿಕ ಗಾಯಾಳು ವೈದ್ಯರನ್ನು ಅಂಬುಲೆನ್ಸ್ ನಲ್ಲಿ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೀಗಾಗಿ ತಡವಾಗಿದ್ದರಿಂದ ರಸ್ತೆ ಮಧ್ಯೆಯೇ ಡಾ. ರಮೇಶ್ ಪ್ರಾಣ ಬಿಟ್ಟಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದ ಶಾಸಕರು ಕಾರಲ್ಲಿ ಕರೆದುಕೊಂಡು ಹೋಗಿದ್ದರೆ ವೈದ್ಯರ ಪ್ರಾಣ ಉಳಿಯುತ್ತಿತ್ತು. ಯಾಕಂದರೆ ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಕಾರಲ್ಲಿ ಮೂರ್ನಾಲ್ಕು ನಿಮಿಷದ ದಾರಿ ಅಷ್ಟೆ ಇತ್ತು.
ಒಟ್ಟಿನಲ್ಲಿ ಅಮಾನವೀಯತೆ ತೋರಿದ್ದರಿಂದ ಶಾಸಕರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.