– ರಾಜ್ಯದಲ್ಲಿ ಹಲವಾರು ಮಂದಿ ಮಹಾನಾಯಕರು ಇದ್ದಾರೆ
– ಮಹಾನಾಯಕರ ಜೊತೆಗೆ ಮಹಾನಾಯಕಿರೂ ಇದ್ದಾರೆ
ಬೆಂಗಳೂರು: ಸಿಡಿ ವಿಚಾರವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳುವ ಮಹಾ ನಾಯಕ ಯಾರು ಎಂದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಮಹಾ ನಾಯಕರು ಬಹಳಷ್ಟು ಜನ ಇದ್ದಾರೆ. ಬಿಜೆಪಿಯಲ್ಲೂ ಇದ್ದಾರೆ. ನಮ್ಮ ಪಕ್ಷದಲ್ಲೂ ಬಹಳ ನಾಯಕರುಗಳು ಇದ್ದಾರೆ. ಇವರೊಂದಿಗೆ ಮಹಾ ನಾಯಕಿನೂ ಇದ್ದಾರೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ರಕ್ಷಣೆ ಕೊಡಿಸಬೇಕು ಎಂದಿದ್ದಾಳೆ. ಹಾಗಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ನಾನು ನಿನ್ನೆ ಸಂಜೆ ಮಾತಾಡಿದ್ದೇನೆ. ಆ ಯುವತಿಗೆ ರಕ್ಷಣೆ ಕೊಡಿ ಎಂದಿದ್ದೇನೆ. ಯಾರೇ ನಮ್ಮ ಬಳಿ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡರೂ ರಕ್ಷಣೆ ಕೊಡಲೇಬೇಕು. ಸಂತ್ರಸ್ತೆ ಅವಳ ತಂದೆ-ತಾಯಿಗೂ ರಕ್ಷಣೆ ಕೇಳಿದ್ದಾಳೆ. ಹೀಗಾಗಿ ಅವರಿಗೂ ರಕ್ಷಣೆ ಕೊಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಆ ಸಂತ್ರಸ್ತೆ ಮರೆಯಾಗಿದ್ದು, ವೀಡಿಯೋ ಸ್ಟೆಟ್ ಮೆಂಟ್ ಕೊಡೋ ಬದಲು ಎಸ್ ಐಟಿ ಮುಂದೆ ಬರಲಿ ಎನ್ನೋದು ನನ್ನ ಸಲಹೆ. ಅಜ್ಞಾತವಾಸದಲ್ಲಿ ಇರುವ ಬದಲು ನಡೆದಿದ್ದು ಏನು? ಸತ್ಯ ಏನು ಎನ್ನುದನ್ನು ಹೇಳಲಿ. ತನಿಖೆಗೆ ಸಹಕರಿಸಲಿ ಎಂದರು.
ನನ್ನನ್ನು ಬಳಸಿಕೊಂಡಿದ್ದಾರೆ, ಉದ್ಯೋಗ ಕೇಳಿದ್ದಕ್ಕೆ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಳು. ನಾನು ಸಂತ್ರಸ್ತೆ ವೀಡಿಯೋ ಆಧಾರದ ಮೇಲೆ ರಮೇಶ್ ಜಾರಕಿಹೊಳಿ ಮೇಲೆ ರೇಪ್ ಕೇಸ್ ಹಾಕಬೇಕು ಎಂದು ಒತ್ತಾಯ ಮಾಡಿದ್ದೆ. ನನಗೆ ರಮೇಶ್ ಜಾರಕಿಹೊಳಿ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ರಮೇಶ್ ಜಾರಕಿಹೊಳಿ ನನ್ನ ಒಳ್ಳೆ ಸ್ನೇಹಿತ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೆತ್ತಿಮೇಲೆ ಕತ್ತಿ ತೂಗಾಡುತ್ತಿದೆ. ಯಡಿಯೂರಪ್ಪ ಅವರು ನನ್ನ ಜೊತೆಗೆ ಎಲ್ಲಾ ಎಂಎಲ್‍ಎಗಳು ಇದ್ದಾರೆ ಎಂದು ತೋರಿಸಿಕೊಳ್ಳುವುದಕ್ಕೆ ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಆದರೆ ಹಾಗಿಲ್ಲ ಅಂತ ಯತ್ನಾಳ್ ಪದೇ ಪದೇ ಹೇಳುತ್ತಿದ್ದಾರೆ. ಈ ಮೊದಲು ಸಿಎಂ ಬದಲಾವಣೆ ಆಗುತ್ತಾರೆ ಎಂದು ಮಾಹಿತಿ ಇತ್ತು ಆಗ ಆಗಲಿಲ್ಲ ಈಗ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.
ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಕೇಸು ಹಾಕಿದ್ದು ಖಂಡನೀಯ. ಅವರು ಬೆಂಗಳೂರು ಸೀಜ್ ಮಾಡಿ ಎಂದಿದ್ದರು. ಸೀಜ್ ಮಾಡಿ ಎಂದರೆ ಮುತ್ತಿಗೆ ಹಾಕಿ ಎಂದು ಅರ್ಥ. ಅದು ಪ್ರಚೋದನಾ ಕಾರಿ ಭಾಷಣ ಅಲ್ಲಾ ಎಂದು ಸಮರ್ಥಿಸಿಕೊಂಡರು.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನಾಳೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದು, ತಳಿ, ಡೆಂಕಣಿಕೋಟ, ಹೊಸೂರು, ಬಾಗಲೂರು, ಬೇರಿಗೆ, ಸೂಲಗಿರಿ ಹಾಗೂ ವೇಪನಪಲ್ಲಿಯಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಸಿದ್ದರಾಮಯ್ಯ ಅವರು ಮಾತನಾಡಲಿದ್ದಾರೆ.