ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಪುತ್ರಿ ನಿಹಾರಿಕಾ ವಿವಾಹ ನಿಶ್ಚಯವಾಗಿದ್ದು, ಡಿಸೆಂಬರ್ 28ರಂದು ವಿವಾಹ ನಡೆಯಲಿದೆ.
ಮಗಳ ಮದುವೆ ತಯಾರಿಯಲ್ಲಿ ರಮೇಶ್ ಸಖತ್ ಬ್ಯುಸಿಯಾಗಿದ್ದು, ನಿಹಾರಿಕಾ ಅವರು ಅಕ್ಷಯ್ ಅವರನ್ನು ಕೈ ಹಿಡಿಯುತ್ತಿದ್ದಾರೆ. ಅಕ್ಷಯ್ ಸಿನಿಮಾ ಕ್ಷೇತ್ರದವರಲ್ಲ ಬದಲಿಗೆ ನಿಹಾರಿಕಾ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡೂ ಕುಟುಂಬದವರು ನಿಶ್ಚಯಿಸಿ ವಿವಾಹ ಮಾಡುತ್ತಿದ್ದಾರೆ.
ಕೊರೊನಾ ಹಿನ್ನೆಲೆ ಗ್ರ್ಯಾಂಡ್ ಆಗಿ ವಿವಾಹ ಮಾಡುತ್ತಿಲ್ಲ. ಹೆಚ್ಚು ಜನರು ಸೇರುವ ಕಾರಣ ಕೊರೊನಾ ಮುನ್ನಚ್ಚರಿಕೆ ಪಾಲಿಸುವುದು ಕಷ್ಟ. ಹೀಗಾಗಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ. ಯಾರಿಗೆಲ್ಲ ಆಹ್ವಾನಿಸಲಾಗುತ್ತಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಅಲ್ಲದೆ 2021ರ ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ನಡೆಯಲಿದೆ. ಅಂದು ಚಿತ್ರರಂಗ ಸೇರಿದಂತೆ ಎಲ್ಲ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಚಿತ್ರರಂಗದವರು, ಕರ್ನಾಟಕದ ಜನತೆ ಹಾಗೂ ಮಾಧ್ಯಮದವರು ನೀಡಿರುವ ಪ್ರೋತ್ಸಾಹ ಅಪಾರ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ನವ ದಂಪತಿ ಮೇಲೆ ಇರಲಿ ಎಂದು ರಮೇಶ್ ಅರವಿಂದ್ ವಿನಂತಿಸಿದ್ದಾರೆ.