– 10 ಲಕ್ಷ ಹಣ ಕೊಟ್ಟು ಮತ್ತೊಂದು ಮದುವೆಗೆ ಸಿದ್ಧ
ಹೈದರಾಬಾದ್: ಮದುವೆಯಾದ ನಂತರ ಪತ್ನಿಗೆ ಮೋಸ ಮಾಡಿದ ಆರೋಪದ ಮೇಲೆ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಹೈದರಾಬಾದ್‍ನ ಸರೋರ್ ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಎಸ್.ಪವನ್ (30) ಬಂಧಿತ ಟೆಕ್ಕಿ. ಹೈದರಾಬಾದ್‍ನ ನಾಗಾರ್ಜುನ ಕಾಲೋನಿ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿ ಪವನ್ ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು.
ಏನಿದು ಪ್ರಕರಣ?
ಆರೋಪಿ ಪವನ್ 2017ರಲ್ಲಿ ಪ್ರೀತಿಸಿ ಯುವತಿಯನ್ನು ರಹಸ್ಯವಾಗಿ ಮದುವೆಯಾಗಿದ್ದನು. ಪತ್ನಿಯ ಜೊತೆ ಬೆಂಗಳೂರಿನಲ್ಲಿ ಒಂದು ವರ್ಷ ಸಂಸಾರ ನಡೆಸಿದ್ದನು. ಒಂದು ವರ್ಷದ ನಂತರ ಪವನ್, ನೀನು ಹೈದರಾಬಾದ್‍ಗೆ ಹಿಂದಿರುಗಿ ಪೋಷಕರ ಜೊತೆಗಿರು. ನಾನು ನಮ್ಮ ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಅವರ ಒಪ್ಪಿಗೆ ಪಡೆದು ನಿನ್ನನ್ನು ಕರೆಸಿಕೊಳ್ಳುತ್ತೇನೆ ಎಂದು ಪತ್ನಿಯ ಮನವೊಲಿಸಿದ್ದನು. ಇದನ್ನು ನಂಬಿದ ಪತ್ನಿ ಹೈದರಾಬಾದ್‍ಗೆ ವಾಪಸ್ ಹೋಗಿದ್ದಾರೆ.
ಪತ್ನಿ ಹೈದರಾಬಾದ್‍ಗೆ ಹೋಗುತ್ತಿದ್ದಂತೆ ಪವನ್ ಸೋಶಿಯಲ್ ಮಿಡಿಯಾದಲ್ಲಿ ತನ್ನ ಎಲ್ಲಾ ಖಾತೆಯನ್ನು ಬ್ಲಾಕ್ ಮಾಡಿದ್ದನು. ಅಲ್ಲದೇ ಫೋನ್ ಸಹ ಸ್ವಿಚ್ ಆಫ್ ಮಾಡಿದ್ದನು. ಇತ್ತ ಪತ್ನಿ ಎಷ್ಟು ಬಾರಿ ಫೋನ್ ಮಾಡಿದರೂ ಸ್ವಿಚ್ ಆಫ್ ಬರುತ್ತಿತ್ತು. ಕೊನೆಗೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
“2017ರಲ್ಲಿ ನನ್ನನ್ನು ಮದುವೆಯಾದ ನಂತರ ಪವನ್ ಮತ್ತು ನಾನು ಹನಿಮೂನ್‍ಗಾಗಿ ಊಟಿಗೆ ಹೋಗಿದ್ದೆವು. ಕೆಲವು ದಿನಗಳ ನಂತರ ನನ್ನನ್ನು ಮತ್ತೆ ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೈದರಾಬಾದ್‍ಗೆ ಕಳುಹಿಸಿದನು. ಪವನ್ ನನ್ನ ಸಂಬಂಧಿಯಾಗಿದ್ದು, ಎರಡು ವರ್ಷಗಳಿಂದ ಆತನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಕಳೆದ ಎರಡು ವರ್ಷಗಳಿಂದ ನಾನು ಅವನಿಗೆ ಇಮೇಲ್‍ಗಳನ್ನು ಕಳುಹಿಸಿದ್ದೇನೆ. ಆದರೆ ಯಾವುದಕ್ಕೂ ಅವನು ಪ್ರತಿಕ್ರಿಯಿಸಲಿಲ್ಲ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪವನ್ ಹೈದರಾಬಾದ್‍ಗೆ ಹಿಂದಿರುಗಿದ್ದಾಗ ಆತನ ಮನೆಗೆ ಹೋಗಿದ್ದೆ. ಆಗ ಅವನು ನನ್ನೊಂದಿಗೆ ಇರಲು ಇಷ್ಟಪಟ್ಟಿಲ್ಲ. ಅಲ್ಲದೇ ನನಗೆ 10 ಲಕ್ಷ ರೂಪಾಯಿ ನೀಡಿ ಅಲ್ಪಾವಧಿಯ ಸಂಬಂಧಗಳು ಇತ್ತೀಚೆಗೆ ಸಾಮಾನ್ಯವೆಂದು ಹೇಳಿದನು. ಅವನ ಕುಟುಂಬವು ಈಗ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ. ಹೀಗಾಗಿ ಎಫ್‍ಐಆರ್ ದಾಖಲಿಸಿದ್ದೇನೆ” ಎಂದು ನೊಂದ ಮಹಿಳೆ ಹೇಳಿದ್ದಾರೆ.
ಸದ್ಯಕ್ಕೆ ಸರೋರ್ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಪವನ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪವನ್‍ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.