ನೆಲಮಂಗಲ: ಯುಗಾದಿ ಹಬ್ಬ ಹತ್ತಿರವಾಗುತ್ತಿದ್ದಂತೆ ಹಬ್ಬದ ನೆಪದಲ್ಲಿ ಮಹಾಮಾರಿ ಕೊರೊನವನ್ನು ಜನ ಮರೆತ್ತಿದ್ದಾರೆ. ನಗರದ ವಾರದ ಸಂತೆಯಲ್ಲಿ ಯುಗಾದಿ ಹಬ್ಬಕ್ಕೆ ಕುರಿ ಮೇಕೆ ಖರೀದಿಗೆ ಮುಗಿಬಿದ್ದ ಜನರು ಕೊರೊನಾ ಎರಡನೇ ಅಲೆ ಮೆರೆತು ಬಿಂದಾಸ್ ವ್ಯಾಪಾರ ಮಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುರಿ, ಮೇಕೆ ಸಂತೆಯಲ್ಲಿ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಇಲ್ಲದೆ ಜನರು ತಮ್ಮ ತಮ್ಮ ವ್ಯಾಪಾರದಲ್ಲಿ ತೊಡಗಿಕೊಂಡಿರುವ ದೃಶ್ಯ ಸಾಮಾನ್ಯವಾಗಿತ್ತು. ಕೊರೊನಾ ಭೀತಿ ನಡುವೆಯು ರಸ್ತೆಯಲ್ಲಿ ಮತ್ತು ವಾರದ ಸಂತೆಯಲ್ಲಿ ಜನಜಂಗುಳಿ ಮಾತ್ರ ಅಪಾರ ಪ್ರಮಾಣದಲ್ಲಿ ಕಂಡುಬಂದಿದೆ.
ಯುಗಾದಿ ಹಬ್ಬಕ್ಕೆ ಕುರಿ ಮೇಕೆ ಖರೀದಿಗೆ ಮುಗಿಬಿದ್ದ ಜನರ ಮೇಲೆ ನಿಯಂತ್ರಣ ಹೇರಲು ಯಾವೊಬ್ಬ ಅಧಿಕಾರಿ ಅಥವಾ ಜನಪ್ರತಿನಿಧಿ ಸುಳಿವೇ ಇಲ್ಲದಂತಾಗಿದೆ. ಇತ್ತ ನೆಲಮಂಗಲ ತಾಲೂಕಿನಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ.
ವಾರದ ಸಂತೆ ನಡೆಸಲು ಸೂಕ್ತ ವ್ಯವಸ್ಥೆಯಿಲ್ಲದೆ ರೈತರ ಪರದಾಟದ ಜೊತೆ ಸಾರ್ವಜನಿಕರು ಕೊರೊನಾ ಮರೆತ್ತಿದ್ದಾರೆ. ಜನರನ್ನು ನಿಯಂತ್ರಿಸದ ನಗರಸಭೆ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ.