ಚಾಮರಾಜನಗರ: ಯುಗಾದಿ ಹಬ್ಬಕ್ಕೆ ಪೋಷಕರು ಹೊಸ ಬಟ್ಟೆ ಕೊಡಿಸಿಲ್ಲವೆಂದು ಮನನೊಂದ ಬಾಲಕಿಯೋರ್ವಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.
ಹರ್ಷಿತಾ (12) ಮೃತ ಬಾಲಕಿ. ಈಕೆ ಪಟ್ಟಣದ ಬಸ್ತೀಪುರ ಬಡಾವಣೆಯ ರಸ್ತೆ ನಾಯ್ಡು ತೋಟದ ಸಮೀಪದ ನಿವಾಸಿ ಬಸವರಾಜು ಎಂಬವರ ಪುತ್ರಿ. ಇದೀಗ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹರ್ಷಿತಾ ಹಬ್ಬಕ್ಕೆ ಹೊಸ ಬಟ್ಟೆ ತೆಗೆದುಕೊಡಿ ಎಂದು ಕೇಳಿದಾಗ ಆಕೆಯ ಪೋಷಕರ ಸಂಬಳವಾದ ಬಳಿಕ ಎಲ್ಲರೂ ಸೇರಿ ಬಟ್ಟೆ ತೆಗೆದುಕೊಳ್ಳೋಣ ಎಂದು ಹೇಳಿದ್ದಾರೆ. ಅಷ್ಟಕ್ಕೆ ಬೇಸರದಿಂದ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.