ಬೆಂಗಳೂರು: ಹೊಸ ರೂಪಾಂತರ ಕೊರೊನಾ ವೈರಸ್ ಗುಪ್ತಗಾಮಿನಿಯ ರೀತಿಯಲ್ಲಿ ತನ್ನ ಬಾಹುಗಳನ್ನ ವಿಸ್ತರಿಸಿಕೊಳ್ಳುತ್ತಿದೆ. ಆದ್ರೆ ಬ್ರಿಟನ್ ಮಹಾಮಾರಿಗೆ ಬ್ರೇಕ್ ಹಾಕಬೇಕಾಗಿರುವ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಯುಕೆಯಿಂದ ಬಂದ ಜನರ ಪೈಕಿ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬುದರ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ವಾ ಅನ್ನೋ ಪ್ರಶ್ನೆ ಎದುರಾಗಿದೆ.
ಆರೋಗ್ಯ ಸಚಿವರ ಪ್ರಕಾರ ಮಿಸ್ ಆದವರ ಸಂಖ್ಯೆ 75 ಆದ್ರೆ ಬಿಬಿಎಂಪಿ ಅಧಿಕಾರಿಗಳ 114 ಜನ ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಇನ್ನೂ ಬಿಬಿಎಂಪಿ ಬಳಿಯಲ್ಲಿರೋ ಮಾಹಿತಿ ಬಗ್ಗೆ ನಮಗೆ ಗೊತ್ತಿಲ್ಲ ಅಂತ ಸ್ವತಃ ಸಚಿವ ಸುಧಾಕರ್ ಅವರೇ ಒಪ್ಪಿಕೊಂಡಿದ್ದಾರೆ.
ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಆರೋಗ್ಯ ಸಚಿವ ಕೆ.ಸುಧಾಕರ್, ಬಿಬಿಎಂಪಿ ಅವರಿಗೆ ಯಾವ ಮಾಹಿತಿ ಬಂದಿದೆ ಅಂತ ನನಗೆ ಗೊತ್ತಿಲ್ಲ. ಯುಕೆಯಿಂದ ಬಂದವರ ಪೈಕಿ ಟ್ರೇಸ್ ಆಗದಿರುವವರ ಸಂಖ್ಯೆ 75. ಮಿಸ್ ಆಗಿರುವವರನ್ನ ಪತ್ತೆ ಮಾಡಿಕೊಡಬೇಕೆಂದು ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಪತ್ತೆ ಮಾಡುವ ವಿಚಾರವಾಗಿ ಬಿಬಿಎಂಪಿ ಕಮಿಷನರ್ ಜೊತೆಯಲ್ಲಿಯೂ ಮಾತಾಡಿದ್ದೇನೆ ಎಂದರು.
ಯುಕೆಯಿಂದ ವಾಪಸ್ ಆಗಿರುವ 37 ಜನರಿಗೆ ಆರ್.ಟಿ.ಪಿಸಿಆರ್ ನಲ್ಲಿ ಪಾಸಿಟಿವ್ ಬಂದಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 17 ಜನರಿಗೂ ಕೊರೊನಾ ಸೋಂಕು ತಗುಲಿದೆ. ಇವುಗಳಲ್ಲಿ 10 ಮಂದಿಯಲ್ಲಿ ಹೊಸ ರೂಪಾಂತರ ವೈರಸ್ ಕಂಡು ಬಂದಿದೆ. ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವರನ್ನ ಟ್ರೇಸ್ ಮಾಡಿ ಐಸೋಲೇಟ್ ಮಾಡಲಾಗುತ್ತಿದೆ ಎಂದು ಹೇಳಿದರು.
ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ, ಇಮಿಗ್ರೇಶನ್ ಪ್ರಾಧಿಕಾರ, ವಿಮಾನ ನಿಲ್ದಾಣದ ಮಾಹಿತಿ ಪ್ರಕಾರ ಹುಡುಕಾಟ ನಡೆಯುತ್ತಿದೆ. ಈ ಮಾಹಿತಿಯನ್ನ ವಲಯ ಆರೊಗ್ಯಾಧಿಕಾರಿಗಳಿಗೆ ಕಳುಹಿಸಿ ಪತ್ತೆ ಮಾಡುವ ಕೆಲಸ ಮಾಡಲಾಗುತ್ತದೆ. ಪತ್ತೆಯಾಗದವರ ಮಾಹಿತಿಯನ್ನ ಪೊಲೀಸ್ ಇಲಾಖೆಗೆ ರವಾನಿಸಿದ್ದೇವೆ. 242ರಲ್ಲಿ ಇದುವರೆಗೂ 114 ಜನರು ನಾಟ್ ರೀಚಬಲ್ ಆಗಿದ್ದಾರೆ. ಡಿಸೆಂಬರ್ 1ರಂದು ಬಂದವರೇ ನಾಪತ್ತೆಯಾಗಿದ್ದಾರೆ. ಡಿಸೆಂಬರ್ 2ರ ನಂತರದ ಪಟ್ಟಿಯಲ್ಲಿ ಬಹುತೇಕರ ಟೆಸ್ಟ್ ಆಗಿದೆ.