ದುಬೈ: ಕೊರೊನಾದಿಂದಾಗಿ ಮುಂದೂಡಲ್ಪಟ್ಟ ಐಪಿಎಲ್‍ನ ಮುಂದುವರಿಯದ ಭಾಗವನ್ನು ದುಬೈನಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ಈ ಕುರಿತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಐಪಿಎಲ್ ಆಯೋಜನೆ ನಾವು ಬಿಸಿಸಿಐಗೆ ಪೂರ್ತಿ ಬೆಂಬಲ ಸೂಚಿಸುವುದಾಗಿ ತಿಳಿಸಿದೆ.
ದುಬೈನಲ್ಲಿ ಐಪಿಎಲ್ ಆಯೋಜನೆ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಜಿ ಅರುಣ್ ಧುಮಾಲ್ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ದುಬೈನ ಕಮಿಷನರ್ ಜನರಲ್ ಆಗಿರುವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತ್ರ ಈ ಸಭೆಯಲ್ಲಿ ಭಾಗಿಯಾಗಿಲ್ಲ. ಅವರು ಮುಂದಿನ ಕೆಲ ದಿನಗಳ ಬಳಿಕ ಕುಟುಂಬ ಸಮೇತ ದುಬೈಗೆ ಆಗಮಿಸಿ ಐಪಿಎಲ್ ವೇಳಾಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
ಐಪಿಎಲ್ ಭಾಗ-2ರಲ್ಲಿ ಶೇ. 30ರಷ್ಟು ಪ್ರೇಕ್ಷಕರಿಗೂ ಅವಕಾಶ ಕೊಡುವುದಾಗಿ ಇಸಿಬಿ, ಬಿಸಿಸಿಐ ಅಧಿಕಾರಿಗಳಿಗೆ ತಿಳಿಸಿದೆ. ದುಬೈನಲ್ಲಿ ಹಲವು ಕ್ರಿಕೆಟ್ ಪಂದ್ಯಗಳು ಮುಂದೆ ನಡೆಯಲಿರುವ ಕಾರಣ ಬಿಡುವಿಲ್ಲದ ಕ್ರಿಕೆಟ್‍ಗೆ ದುಬೈ ಸಾಕ್ಷಿಯಾಗಲಿದೆ. ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್‍ಗಾಗಿ ಐಸಿಸಿ ಮಹತ್ವದ ನಿರ್ಧಾರ – ಬದಲಾವಣೆಯ ಪರ್ವ ಆರಂಭ
2021ರ ಐಪಿಎಲ್ ಮುಂದೂಡಲ್ಪಟ್ಟ ಪಂದ್ಯಗಳನ್ನು ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದ್ದು, ಇದೀಗ ವಿದೇಶಿ ಆಟಗಾರರು ಈ ವೇಳೆ ಐಪಿಎಲ್‍ನಲ್ಲಿ ಪಾಲ್ಗೊಳ್ಳಲು ಆಗುವಂತೆ ವ್ಯವಸ್ಥೆಯನ್ನು ಬಿಸಿಸಿಐ ಮಾಡುತ್ತಿದೆ. ಈಗಾಗಲೇ ಇಂಗ್ಲೆಂಡ್ ಆಟಗಾರರು ಲಭ್ಯವಿರುವುದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಇನ್ನುಳಿದ ದೇಶಗಳ ಆಟಗಾರರ ಲಭ್ಯತೆಯ ಬಗ್ಗೆ ಬಿಸಿಸಿಐ ಚರ್ಚೆ ನಡೆಸುತ್ತಿದೆ.
ಬಿಸಿಸಿಐ ಮೂಲಗಳ ಪ್ರಕಾರ ಐಪಿಎಲ್‍ನ ಉಳಿದ ಪಂದ್ಯಗಳು ದುಬೈನಲ್ಲಿ ಸೆಪ್ಟೆಂಬರ್ ಮೂರನೇ ವಾರ 18 ಅಥವಾ 19ರಂದು ಆರಂಭವಾಗಲಿದ್ದು, ಅಕ್ಟೋಬರ್ 9 ಅಥವಾ 10ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ. ಐಪಿಎಲ್‍ನಲ್ಲಿ ಆಡುತ್ತಿದ್ದ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಕಾರಣ ಐಪಿಎಲ್‍ನ್ನು ಮೇ 4ರಂದು ಬಿಸಿಸಿಐ ಮುಂದೂಡಿತ್ತು. ಇದೀಗ ಮತ್ತೆ ಪಂದ್ಯಗಳನ್ನು ನಡೆಸಲು ತೀರ್ಮಾಣಿಸಿದೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು
ಸೆಪ್ಟೆಂಬರ್ 18 ಶನಿವಾರ ಮತ್ತು 20 ಭಾನುವಾರವಾಗಿರುವುದರಿಂದ ಪಂದ್ಯಗಳನ್ನು ಆರಂಭಿಸಲು ಇದು ಉತ್ತಮ ದಿನವಾಗಿದೆ. ಇದರಂತೆ ಅಕ್ಟೋಬರ್ 9 ಮತ್ತು 10 ಕೂಡ ವಾರದ ಕೊನೆಯ ದಿನಗಳಾಗಿರುವುದರಿಂದ ಫೈನಲ್ ಕೂಡ ನಡೆಸಲು ಸರಿಯಾದ ದಿನವಾಗಿದೆ. ಹಾಗಾಗಿ ಉಳಿದ 31 ಪಂದ್ಯಗಳನ್ನು 10 ಡಬಲ್ ಹೆಡರ್, 7 ಸಿಂಗಲ್ ಹೆಡರ್ ಮತ್ತು 4 ಮುಖ್ಯ ಪಂದ್ಯಗಳನ್ನು ನಡೆಸಲು ತಯಾರಿ ಆರಂಭವಾಗಿದೆ ಎಂದು ತಿಳಿದು ಬಂದಿದೆ.