ಬೆಂಗಳೂರು: ಶಾಲೆಗಳನ್ನು ಈಗ ತೆರೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಪೋಷಕರು ಹೊಂದಿದ್ದಾರೆ. ಆದ್ದರಿಂದ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಡಿಕೆ, ಸರ್ಕಾರದ ಇತ್ತೀಚಿನ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಗಳನ್ನು ಆರಂಭಿಸಬೇಕು ಎಂಬ ನಿರ್ಧಾರ ಮಾಡಿದೆ ಎಂಬ ಮಾಹಿತಿ ಇದೆ. ಸರ್ಕಾರ ಶಾಲೆ ಪ್ರಾರಂಭ ಮಾಡುವುದು ಬೇಡ. ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಅಭಿಯಾನ ನಡೆಯುತ್ತಿದೆ. ಪೋಷಕರು ಕೂಡ ಶಾಲೆ ಪ್ರಾರಂಭ ಬೇಡ ಅಂತಿದ್ದಾರೆ. ಸರ್ಕಾರ ವಿದ್ಯಾಗಮ ಕಾರ್ಯಕ್ರಮ ತಂದಿದೆ. ಇದರಿಂದ ಈಗಾಗಲೇ 26 ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದೆ. ಪೋಷಕರ ಪರ ಶಾಲೆ ಆರಂಭಿಸುವುದು ಬೇಡ ಎಂದು ಸರ್ಕಾರಕ್ಕೆ ಒತ್ತಾಯ ಹಾಕುತ್ತಿದ್ದೇನೆ ಎಂದರು.
ಯಾರೋ ಕೆಲವರ ಒತ್ತಡಕ್ಕೆ ಮಣಿದು ಸರ್ಕಾರ ಶಾಲೆ ಆರಂಭಿಸಲು ಮುಂದಾಗಬಾರದು. ಯಾರೋ ನಾಲ್ಕು ಜನ ಹಣ ಸಂಪಾದನೆ ಮಾಡಬೇಕು ಎಂಬ ಕಾರಣಕ್ಕೆ ಪೋಷಕರು ಮತ್ತು ಮಕ್ಕಳ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಬಾರದು. ಕೂಡಲೇ ಸರ್ಕಾರ ವಿದ್ಯಾಗಮ ನಿಲ್ಲಿಸಬೇಕು. ಜೀವ ಇದ್ದರೇ ಜೀವನ ನಡೆಸಬಹುದು. ಮುಖ್ಯಮಂತ್ರಿಗಳಿಗೂ ಶಾಲೆ ಆರಂಭಿಸುವುದು ಬೇಡ. ಯಾರ ಒತ್ತಡಕ್ಕೂ ಮಣಿದು ಈ ಬಗ್ಗೆ ಚರ್ಚೆ ನಡೆಸಬೇಡಿ ಎಂದು ಅವರಿಗೆ ಸ್ವತಃ ಕರೆ ಮಾಡಿ ಒತ್ತಾಯ ಮಾಡುತ್ತೇನೆ ಎಂದರು.