ಯಾದಗಿರಿ ಪೊಲೀಸ್ ಇಲಾಖೆಯಲ್ಲಿ ಸೀನಿಯರ್, ಜೂನಿಯರ್ ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ

Public TV
2 Min Read
YGR POLICE

– ಸಣ್ಣ ಪುಟ್ಟ ಕಾರಣ ಹೇಳಿ ಜೂನಿಯರ್ ಅಧಿಕಾರಿಗಳಿಗೆ ಶಿಕ್ಷೆ
– ಮಾನಸಿಕವಾಗಿ ಕುಗ್ಗುತ್ತಿರುವ ಅಧಿಕಾರಿಗಳು

ಯಾದಗಿರಿ: ಜಿಲ್ಲೆಯಲ್ಲಿ ಜನರ ನಿರ್ಲಕ್ಷ್ಯದಿಂದ ಕೊರೊನಾ ತಾಂಡವಾಡುತ್ತಿದೆ. ಈ ಮಧ್ಯೆ ಮರಳು ಮಾರಾಟ ದಂಧೆ, ಮದ್ಯ ಮಾರಾಟ, ಇಸ್ಪೀಟು, ಮಟ್ಕಾ ಮಾಫಿಯಾಗಳು ಯಾರ ಭಯವಿಲ್ಲದೆ ನಡೆಯುತ್ತಿದೆ. ಆದರೆ ಇವುಗಳನ್ನು ತಡೆಯಬೇಕಾದ ಪೊಲೀಸ್ ಇಲಾಖೆ ಜಾಣ ನಿದ್ದೆಗೆ ಜಾರಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.

YGR 1

ಇನ್ನೊಂದೆಡೆ ಯಾದಗಿರಿ ಜಿಲ್ಲೆಯಲ್ಲಿ ಜೂನಿಯರ್ ಮತ್ತು ಸೀನಿಯರ್ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಹಿರಿಯ ಅಧಿಕಾರಿ ಮಾತಿಗೆ ಸೊಪ್ಪು ಹಾಕದ ಜೂನಿಯರ್ ಆಫೀಸರ್ ಗಳನ್ನು ಸಸ್ಪೆಂಡ್, ವರ್ಗಾವಣೆ, ಶಿಕ್ಷೆ ಕೊಡೆಸುವುದ್ರಲ್ಲಿ ಹಿರಿಯ ಅಧಿಕಾರಿಗಳು ಮಗ್ನರಾಗಿ ಬಿಟ್ಟಿದ್ದಾರೆ. ಇದು ಸಾರ್ವಜನಿಕರ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಎಷ್ಟೋ ಪ್ರಕರಣಗಳು ಇತ್ಯರ್ಥವಾಗದೇ ಉಳಿದು ಬಿಟ್ಟಿವೆ.

YGR 2

ಸಣ್ಣಪುಟ್ಟ ಕಾರಣಗಳಿಗೆ ಮತ್ತು ಕಾರಣವನ್ನು ಸಹ ನೀಡದೆ ಕೊರೊನಾ ಸಮಯದಲ್ಲಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿದ ಪಿಎಸ್‍ಐ ಗಳನ್ನು ಅಮಾನತು ಮಾಡಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. ಕಾರಣವಿಲ್ಲದೆ ಗುರುಮಿಠಕಲ್ ಲೇಡಿ ಪಿಎಸ್‍ಐ ಶೀಲಾರನ್ನು ರಾತ್ರೋರಾತ್ರಿ ಮಹಿಳಾ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆಭರಣಗಳ ಪ್ರಕರಣ ಒಂದರಲ್ಲಿ ಕರ್ತವ್ಯಲೋಪ ಅಂತ ಸೈದಾಪುರ ಲೇಡಿ ಪಿಎಸ್‍ಐ ಸುವರ್ಣ ಅವರನ್ನು ಅಮಾನತು ಮಾಡಲಾಗಿದೆ. ಸುರಪುರ ಪಿಎಸ್‍ಐ ಚೇತನ ಲಾಕ್‍ಡೌನ್ ಸಮಯದಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡಿ, ಸುರಪುರ ಸಿಂಗಂ ಅಂತ ಹೆಸರು ಪಡೆದಿದ್ದರು. ಅವರನ್ನು ಸಹ ವಿಚಾರಣೆ ನಡೆಸದೆ ಏಕಾಏಕಿ ಅಮಾನತು ಮಾಡಲಾಗಿದೆ.

YGR

ಠಾಣೆಯಲ್ಲಿ ಜನ್ಮದಿನ ಆಚರಿಸಿಕೊಂಡ್ರು ಅಂತ ನಗರ ಠಾಣೆಯ ಪಿಎಸ್ ಐ ಸೌಮ್ಯರನ್ನು ರಾತ್ರೋರಾತ್ರಿ ಬೇರೆ ಠಾಣೆಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಎಲ್ಲಾ ಪಿಎಸ್‍ಐಗಳನ್ನು ಯಾವುದೇ ವಿಚಾರಣೆ ಮಾಡದೆ ಕೇವಲ ಹಿರಿಯ ಅಧಿಕಾರಿಗಳು ನೀಡುವ ವರದಿ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗೆ ನೋಡುವುದಾದ್ರೆ ಶಿಕ್ಷೆ ಅನುಭವಿಸಿದವರೆಲ್ಲಾ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಹಗಲು ರಾತ್ರಿ ಕೆಲಸ ಮಾಡಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದವರಾಗಿದ್ದಾರೆ. ಜಿಲ್ಲೆಯ ಪ್ರಮುಖ ವಾಟ್ಸಾಪ್ ಗ್ರೂಪ್ ಗಳಲ್ಲಿ ಇವರ ಬಗ್ಗೆ ಒಳ್ಳೆಯ ಸಂದೇಶಗಳು ಹರಿದಾಡುತ್ತಿದ್ದವು.

YGR 3

ಹಿರಿಯ ಅಧಿಕಾರಿಗಳು ಕೊರೊನಾ ನಿಯಮ ಪಾಲಿಸದೆ, ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾರೆ. ಆದರೆ ಅದೇ ಜೂನಿಯರ್ ಆಫೀಸರ್ ಜನ್ಮದಿನ ಆಚರಿಸಿಕೊಂಡ್ರೆ ಶಿಕ್ಷೆ ನೀಡುತ್ತಾರೆ. ಇದು ಯಾವ ನ್ಯಾಯ ಅಂತ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಸ್ಪೀಟು ದಂಧೆ ಜೋರಾಗಿದೆ. ಕಳೆದ ಎರಡು ದಿನಗಳ ಹಿಂದೆ ಯರಗೋಳದಲ್ಲಿ ಭಾರೀ ಮೊತ್ತದ ದಾಳಿ ನಡೆದಿದೆ. ಇದರಲ್ಲಿ ಸ್ಥಳೀಯ ಪಿಎಸ್ ಐ ಲೋಪ ಇರುವುದು ಸ್ಪಷ್ಟವಾಗಿದೆ. ಹೀಗಿದ್ದರೂ ಇವರ ಮೇಲೆ ಇನ್ನೂ ಕ್ರಮವಾಗಿಲ್ಲದಿರುವುದು ಹಲವಾರು ಅನುಮಾನಗಳನ್ನು ಮೂಡಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *