– ಯಡಿಯೂರಪ್ಪ ಎಂಟಿಆರ್ ಫುಡ್ ಅಲ್ಲ
ದಾವಣಗೆರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಹಿಂದೆ ಕಾಂಗ್ರೆಸ್ ಪಿತೂರಿ ಇದೆ. ಯತ್ನಾಳ್‍ಗೆ ಮಾನಸಿಕ ಸ್ಥಿತಿ ಸರಿ ಇಲ್ಲ. ತಾಕತ್ ಇದ್ದರೆ ಈಗ ರಾಜಿನಾಮೆ ನೀಡಿ ಮತ್ತೆ ವಿಜಯಪುರದಿಂದ ಗೆದ್ದು ಬರಲಿ, ಆಮೇಲೆ ಮಾತಾಡುವಂತೆ ಏಕವಚನದಲ್ಲಿಯೇ ಶಾಸಕ ರೇಣುಕಾಚಾರ್ಯ ಸವಾಲೆಸೆದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಳೆಹರಳಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಮುಖ್ಯಮಂತ್ರಿ ಬದಲಾವಣೆ ಅಂತ ಹೇಳ್ತಿದ್ದೀರಲ್ವ, ತಾಕತ್ ಇದ್ದರೆ ಮಾಡಿ. ಯಡಿಯೂರಪ್ಪ ಒಬ್ಬ ಎಂಟಿಆರ್ ಫುಡ್ ಅಲ್ಲ. ಪಕ್ಷವನ್ನು ತಳಮಟ್ಟದಿಂದ ಅಧಿಕಾರಕ್ಕೆ ತಂದವರು ಯಡಿಯೂರಪ್ಪ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದು ನೀವಾ ಯತ್ನಾಳ್. ಮುಖ್ಯಮಂತ್ರಿ ಮಾಡಿದ್ದು, ಮೋದಿ ಅಮಿತ್ ಶಾ. ಯಡಿಯೂರಪ್ಪನವರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ನೀವು ಭ್ರಷ್ಟ, ನಿಮ್ಮ ಮಗನನ್ನು ಹಿಡಿದುಕೊಂಡು ರಾಜಕೀಯ ಮಾಡ್ತೀರಾ. ನೀವು ನಿಮ್ಮ ಹೆಂಡತಿ ಮಕ್ಕಳನ್ನು ಹೊರಗೆ ಕಳಿಸಿ ಅಮೇಲೆ ಮಾತಾಡಿ. ನೀವು ವರ್ಜಿನಲ್ ಬಿಜೆಪಿಯಲ್ಲ. ನಿಮ್ಮನ್ನು ಪಕ್ಷ ಉಚ್ಚಾಟನೆ ಮಾಡಿದಾಗ ಪಕ್ಷಕ್ಕೆ ಕರೆ ತಂದಿದ್ದು ಯಡಿಯೂರಪ್ಪ. ಅವರು ಸಂಪೂರ್ಣ ಅವಧಿ ಪೂರೈಸುತ್ತಾರೆ. ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಅರುಣ್ ಸಿಂಗ್ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಏಜೆಂಟ್ ಆಗಿ ಯತ್ನಾಳ್ ವರ್ತನೆ ಮಾಡುತ್ತಾರೆ. ಇವರ ಹೇಳಿಕೆಯಿಂದ ಉಪ ಚುನಾವಣೆಗೆ ಪರಿಣಾಮ ಬೀರುತ್ತದೆ. ಸೋಮವಾರ ವಿಧಾನಸಭೆಯ ಪಡಸಾಲೆಯಲ್ಲಿ ಶಾಸಕರು ಸಭೆ ಸೇರಿ ನಿನಗೆ ಸರಿಯಾದ ಉತ್ತರ ಕೊಡ್ತಿವಿ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಗರಂ ಆದರು.