ಶಿವಮೊಗ್ಗ: ಈ ಹಿಂದೆ ಮುಖ್ಯಮಂತ್ರಿ ಅವರ ನಿವಾಸದಲ್ಲಿ ಅವರ ಆಪ್ತ ಸಹಾಯಕರು, ಅಧಿಕಾರಿಗಳು ಇರುತ್ತಿದ್ದರು. ಆದರೆ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸದಲ್ಲಿ ಹಾವು-ಚೇಳುಗಳ ರೀತಿ ಅವರ ಕುಟುಂಬಸ್ಥರು ಸೇರಿಕೊಂಡಿದ್ದಾರೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು.
ಯತ್ನಾಳ್ ಆರೋಪಕ್ಕೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಡಿವಿಜಿ ಅವರ ಕಗ್ಗದ ಮೂಲಕ ತಿರುಗೇಟು ನೀಡಿದ್ದಾರೆ. ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವನ ಕೊಂಕು ಮಾತಿಗೆ ಕೊರಗುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ಅವರು ಹಾವು-ಚೇಳು ಅಂತ ಆರೋಪ ಮಾಡಿರುವುದು ರಾಜಕೀಯ ವಿರೋಧಿಗಳಿಗೆ. ಈ ರೀತಿಯ ವೈಯಕ್ತಿಕ ಹೇಳಿಕೆಗಳಿಗೆ ದಿನೇ ದಿನೇ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಕೆಲಸ ಮಾಡುವ ಮೂಲಕ, ಪಕ್ಷ ಸಂಘಟನೆ ಮಾಡುವ ಮೂಲಕ ನನ್ನದೇ ಆದ ಸೇವೆ ಮಾಡುತ್ತೇನೆ ಎಂದು ವಿಜಯೇಂದ್ರ ತಿಳಿಸಿದರು.