ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆದಂತಹ ಪ್ರಥಮ ಹಂತದ ವಿಧಾನಸಭೆ ಚುನಾವಣೆಯ 30 ಕ್ಷೇತ್ರಗಳ ಪೈಕಿ 26ರಲ್ಲಿ ಬಿಜೆಪಿಗೆ ಗೆಲುವು ಖಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಪ್ರಥಮ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ನಮ್ಮ ಪಕ್ಷಕ್ಕೆ ಮತ ಹಾಕಿದಂತಹ ಎಲ್ಲರಿಗೂ ಕೂಡ ವಂದನೆಗಳು. ಜನ ತುಂಬಾ ಉತ್ಸಾಹದಿಂದ ಬಂದು ಮತ ಚಲಾವಣೆ ಮಾಡಿದ್ದೀರಿ ಎಂದರು.
ನಾನು ಬೂತ್ ಲೆವೆಲ್ ಮತ್ತು ಪಾರ್ಟಿ ಲೀಡರ್ ಗಳೊಂದಿಗೆ ಚರ್ಚಿಸಿದಾಗ ಪಶ್ಚಿಮ ಬಂಗಾಳದಲ್ಲಿ 30 ರಲ್ಲಿ 26 ಕ್ಷೇತ್ರಗಳಲ್ಲಿ ಗೆಲುವು ಕಂಡರೆ, ಅಸ್ಸಾಂನಲ್ಲಿ 47 ಕ್ಷೇತ್ರಗಳಲ್ಲಿ 37 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ 79.79% ದಾಖಲೆಯ ಪ್ರಮಾಣದಲ್ಲಿ ಮತದಾನ ನಡೆದರೆ, ಅಸ್ಸಾಂನಲ್ಲಿ 72.14% ಮತದಾನ ನಡೆದಿದೆ. ಈ ಮೂಲಕ ಎರಡು ರಾಜ್ಯಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಯಾವುದೇ ತೊಂದರೆ ಇಲ್ಲದೆ ಮತದಾನ ಪ್ರಕ್ರಿಯೆ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಈ ರೀತಿಯಾಗಿ ಶಾಂತಿಯುತ ಮತದಾನ ನಡೆಸಿರುವ ಸಾರ್ವಜನಿಕರಿಗೆ ಧನ್ಯವಾದ. ಹಲವು ವರ್ಷಗಳ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಶಾಂತಿಯುತವಾಗಿ ಮತದಾನ ನಡೆದಿದೆ. ನಾನು ಇಲ್ಲಿನ ಮಹಿಳೆಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ಏಕೆಂದರೆ ನೀವೆಲ್ಲರೂ ಬಿಜೆಪಿ ಪರ ಮತ ಚಲಾಯಿಸಿದ್ದೀರಿ ಎಂದು ಅಭಿಪ್ರಾಯಪಟ್ಟರು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ದಬ್ಬಾಳಿಕೆ ನಲುಗಿ ಹೋಗಿದೆ ಹಾಗಾಗಿ ಜನ ಬದಲಾವಣೆ ಬಯಸಿದ್ದಾರೆ. ನಾನು ಬಂಗಾಳದ ಅಭಿವೃದ್ಧಿಯ ಕುರಿತು ಭರವಸೆ ನೀಡುವುದಾಗಿ ತಿಳಿಸಿದರು.