ಅಬುಧಾಬಿ: ತಾನು ಆಡುತ್ತಿರುವ ಮೊದಲ ಐಪಿಎಲ್ ಆವೃತ್ತಿಯಲ್ಲೇ ಭಾರತೀಯ ಆಟಗಾರನಾಗಿ ಆರ್‌ಸಿಬಿ ತಂಡದ ಯುವ ಆಟಗಾರ ದೇವದತ್ ಪಡಿಕ್ಕಲ್ ಹೊಸ ದಾಖಲೆ ಬರೆಯುವ ತವಕದಲ್ಲಿ ಇದ್ದಾರೆ.
ಈ ಬಾರಿಯ ಐಪಿಎಲ್‍ನಲ್ಲಿ ಆರಂಭದಿಂದಲೂ ಭರ್ಜರಿ ಫಾರ್ಮ್‍ನಲ್ಲಿರುವ ದೇವದತ್ ಪಡಿಕ್ಕಲ್ ಅರ್ಧಶತಕಗಳ ಮೇಲೆ ಅರ್ಧಶತಕ ಸಿಡಿಸಿ ಮಿಂಚುತ್ತಿದ್ದಾರೆ. ಈ ಮೂಲಕ ಈಗಾಗಲೇ ತಾವು ಆಡಿದ 12 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳ ಸಮೇತ 417 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಇದ್ದಾರೆ.
ಪಡಿಕ್ಕಲ್ 417 ರನ್ ಸಿಡಿಸುವ ಮೂಲಕ ತಾನು ಆಡಿದ ಮೊದಲ ಐಪಿಎಲ್ ಆವೃತ್ತಿಯಲ್ಲೇ ಭಾರತದ ಆಟಗಾರನಾಗಿ ಅತೀ ಹೆಚ್ಚು ರನ್ ಸಿಡಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೊದಲು 2014 ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಅವರು ತಾವು ಆಡಿದ ಮೊದಲ ಆವೃತ್ತಿಲ್ಲೇ 14 ಇನಿಂಗ್ಸ್ ಗಳಿಂದ 33.8ರ ಸರಾಸರಿಯಲ್ಲಿ 439 ರನ್ ಹೊಡೆದಿದ್ದರು.
2014ರಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಐಯ್ಯರ್ ಆಡಿದ 14 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ ದೇವದತ್ ಪಡಿಕ್ಕಲ್ ತಾವು ಆಡಿದ 12 ಪಂದ್ಯಗಳಲ್ಲೇ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೇ ಇನ್ನೂ ಕೇವಲ 22 ರನ್ ಸಿಡಿಸಿದರೆ, ಪಡಿಕ್ಕಲ್ ತಾವು ಆಡಿದ ಮೊದಲ ಅವೃತ್ತಿಯಲ್ಲೇ ದಾಖಲೆ ಬರೆಯವ ಸನಿಹದಲ್ಲಿದ್ದಾರೆ. ವಿದೇಶಿ ಆಟಗಾರರನ್ನು ಸೇರಿಸಿಕೊಂಡರೆ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರು ತಾವಾಡಿದ ಮೊದಲ ಆವೃತ್ತಿಯಲ್ಲೇ ಬರೋಬ್ಬರಿ 600 ರನ್ ಸಿಡಿಸಿದ್ದರು.
ಪಡಿಕ್ಕಲ್ ಈಗಾಗಲೇ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಬೆಂಗಳೂರು ತಂಡ ಸೋತರೂ ಕೂಡ ಅಂದಿನ ಪಂದ್ಯದಲ್ಲಿ ಪಡಿಕ್ಕಲ್ ಉತ್ತಮವಾಗಿ ಆಡಿದ್ದರು. ಮುಂಬೈ ವಿರುದ್ಧದ ಪಂದ್ಯದಲ್ಲಿ 45 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್ ಸಮೇತ 74 ರನ್ ಸಿಡಿಸಿದ್ದರು. ಆದರೆ ಅಂದು ಆರ್‍ಸಿಬಿ ತಂಡ ಹೀನಾಯವಾಗಿ ಸೋತಿತ್ತು.