ಮೈಸೂರು: ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಶ್ವಾನ ಸೀಮಾ ನಿಧನವಾಗಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರವನ್ನು ಇಂದು ನೆರವೇರಿಸಲಾಯಿತು.
2009ರ ನವೆಂಬರ್ 14 ರಂದು ಸೂಕ್ತ ತರಬೇತಿಯೊಂದಿಗೆ ಸೀಮಾ ಮೈಸೂರು ನಗರ ಪೊಲೀಸ್ ಘಟಕದ ಶ್ವಾನದಳವನ್ನು ಸೇರಿತ್ತು. ಡಾಗ್ ಶೋ, ಮಾಕ್ ಡ್ರಿಲ್( ಅಣುಕು ಕಾರ್ಯಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶೀಮಾ ಶ್ವಾನ, ಗಣ್ಯ ವ್ಯಕ್ತಿಗಳ ಭದ್ರತೆ ಮತ್ತು ನಾಡಹಬ್ಬ ಭದ್ರತೆ ಬಂದೋಬಸ್ತ್ ಕರ್ತವ್ಯದ ಸಂದರ್ಭದಲ್ಲಿ ಎಎಸ್‍ಸಿ ತಂಡದೊಂದಿಗೆ ಉತ್ತಮ ಕರ್ತವ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿತ್ತು.
2016ನೇ ಸಾಲಿನಲ್ಲಿ ಮೈಸೂರು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ಶ್ವಾನವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಪ್ರಶಂಸೆಗಳಿಸಿತ್ತು. ಇಲಾಖೆಯಲ್ಲಿ ಸುಮಾರು 11 ವರ್ಷ 2 ತಿಂಗಳು ಯಶಸ್ವಿಯಾಗಿ ಸೇವೆ ಸಲ್ಲಿಸಿ ವಯೋ ಸಹಜ ಖಾಯಿಲೆಯಿಂದ ಮರಣ ಹೊಂದಿದೆ.
ಡಿಸಿಪಿ ಸಿಎಆರ್ ಕೇಂದ್ರ ಸ್ಥಾನದ ಶಿವರಾಜು ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಎಸಿಪಿ ಸುದರ್ಶನ್, ಶ್ವಾನದಳದ ಉಸ್ತುವಾರಿ ಅಧಿಕಾರಿ ಮೂರ್ತಿ ಕೆ.ಎಂ, ಆರಕ್ಷಕ ನಿರೀಕ್ಷಕರು, ಸುರೇಶ್ ಉಪ ನಿರೀಕ್ಷಕರು, ಹಾಗೂ ಶ್ವಾನ ದಳದ ಇತರೆ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.