ಮೈಸೂರು: ಸ್ಯಾಂಡಲ್‍ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.
ಪತ್ನಿ, ಇಬ್ಬರು ಮಕ್ಕಳು ಹಾಗೂ ಅಳಿಯನ ಜೊತೆ ಭೇಟಿ ನೀಡಿರುವ ಶಿವಣ್ಣ, ಮೃಗಾಲಯದಲ್ಲಿ ಸುತ್ತಾಡಿ ಎಂಜಾಯ್ ಮಾಡಿದ್ದಾರೆ. ಇದೇ ವೇಳೆ ತಾವು ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿಪಟ್ಟಿದ್ದಾರೆ. ಶಿವರಾಜ್ ಕುಮಾರ್ ಅವರು ಮೃಗಾಲಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇಡೀ ಮೃಗಾಲಯ ಸುತ್ತಾಡಿ ಪ್ರಾಣಿಗಳನ್ನು ಕಂಡು ಶಿವಣ್ಣ ಕುಟುಂಬಸ್ಥರು ಸಂತಸಪಟ್ಟರು.
ಕಳೆದ ಆಗಸ್ಟ್ ತಿಂಗಳಲ್ಲಿ ಶಿವಣ್ಣ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದ `ಪಾರ್ವತಿ’ ಎಂಬ ಹೆಸರಿನ ಆನೆಯನ್ನು 75 ಸಾವಿರ ನೀಡಿ ದತ್ತು ಪಡೆದುಕೊಂಡಿದ್ದರು. ಒಂದು ವರ್ಷದ ಅವಧಿಗೆ ಅಂದರೆ 2020 ಆಗಸ್ಟ್ 19 ರಿಂದ 2021 ಆಗಸ್ಟ್ 19 ರವರೆಗೆ ಈ ಆನೆಯನ್ನು ನಟ ದತ್ತು ಸ್ವೀಕರಿಸಿದ್ದಾರೆ.
ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೃಗಾಲಯದಿಂದ ಸಾಕಷ್ಟು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ನಟ ಚಿಕ್ಕಣ್ಣ, ದೇವರಾಜ್, ಸೃಜನ್ ಲೋಕೇಶ್ ಸೇರಿ ಕ್ರಿಕೆಟರ್ಸ್ ಹಾಗೂ ಹಲವು ರಾಜಕಾರಣಿಗಳು ಕೂಡ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.