ಮೈಸೂರು: ಮೈಸೂರಿನಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆ ಕರ್ನಾಟಕ- ಕೇರಳ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರ ಕಂಡುಬಂದಿಲ್ಲ. ಹಕ್ಕಿಜ್ವರದ ಪತ್ತೆಗಾಗಿ ಜಿಲ್ಲಾಡಳಿತ ನಿರಂತರ ಕಾರ್ಯಚರಣೆ ನಡೆಸುತ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಕಳೆದ ವರ್ಷ ಮೈಸೂರಿನಲ್ಲಿ ಹಕ್ಕಿಜ್ವರದ ಹಿನ್ನೆಲೆಯಲ್ಲಿ ‘ಕಲ್ಲಿಂಗ್ ಆಪರೇಷನ್’ ನಡೆದಿತ್ತು. ಅದಕ್ಕಾಗಿ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಹಕ್ಕಿಜ್ವರ ಅಕ್ಕಪಕ್ಕದ ರಾಜ್ಯದಲ್ಲಿ ಕಂಡುಬಂದಿದೆ. ಹಾಗಾಗಿ ಅಲ್ಲಿ ಇದೀಗ ಕಲ್ಲಿಂಗ್ ಆಪರೇಷನ್ ನಡೆಯುತ್ತಿದೆ. ಕೇರಳ ಹಾಗೂ ತಮಿಳುನಾಡು ಗಡಿಯಲ್ಲಿ ಪಕ್ಷಿ ಹಾಗೂ ಕೋಳಿ ಸಾಗಾಟ ನಿಷೇಧ ಮಾಡಲಾಗಿದೆ ಹಾಗೂ ಆ ರಾಜ್ಯಗಳಿಂದ ಬರುವ ವಾಹನಗಳನ್ನ ಸ್ಯಾನಿಟೈಜೆಷನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
Advertisement
Advertisement
ವಲಸೆ ಹಕ್ಕಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಎಲ್ಲೆಲ್ಲಿ ವಲಸೆ ಹಕ್ಕಿಗಳು ಬರುತ್ತವೆ ಅಲ್ಲೆಲ್ಲ ಹಿಕ್ಕೆಗಳ ಸಂಗ್ರಹ ಮಾಡಿ ಲ್ಯಾಬ್‍ಗೆ ಕಳುಹಿಸಲಾಗಿದೆ. ಈವರೆಗೆ ಬಂದಿರುವ ಲ್ಯಾಬ್ ವರದಿಯಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ. ಮೃಗಾಲಯಕ್ಕೆ ತಾತ್ಕಾಲಿಕ ಪ್ರವೇಶ ನಿರ್ಬಂಧ ಅಥವಾ ಇತರೆ ನಿರ್ಧಾರಗಳ ಬಗ್ಗೆ ತೀರ್ಮಾನಿಸಿಲ್ಲ. ಹಕ್ಕಿಜ್ವರ ಪತ್ತೆಯಾದರೆ ಮುಂದಿನ ಹಂತದ ನಿರ್ಧಾರ ಮಾಡುತ್ತೇವೆ ಎಂದು ವಿವರಿಸಿದರು.
Advertisement
ಕೇರಳದಿಂದ ಬರುವ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಬಾವಲಿ ಚೆಕ್ ಪೋಸ್ಟ್‍ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆಯನ್ವಯ ಪೊಲೀಸರು ಕೋಳಿ, ಕೋಳಿ ಮಾಂಸ ಸಾಗಣೆ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸರೊಂದಿಗೆ ಪಶು ಸಂಗೋಪನೆ ಇಲಾಖೆ ಸಿಬ್ಬಂದಿಗಳು ಈ ಕುರಿತಂತೆ ನಿಗಾ ವಹಿಸುತ್ತಿದ್ದಾರೆ.
Advertisement
ಕೊಡಗಿನಲ್ಲಿ ಹೈ ಅಲರ್ಟ್: ಪಕ್ಕದ ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಕನ್ಫರ್ಮ್ ಆಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಣಣಿ ಜಾಯ್ ಹೇಳಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ 3 ಅಂತರರಾಜ್ಯ ಚೆಕ್‍ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೇರಳದಿಂದ ಕೊಡಗಿಗೆ ಕುಕ್ಕುಟೋದ್ಯಮದ ಯಾವುದೇ ಉತ್ಪನ್ನ ಬರುವುದಿಲ್ಲ. ಆದ್ರೆ ಕೊಡಗಿನಿಂದ ಕೇರಳಕ್ಕೆ ಕೋಳಿ ಉತ್ಪನ್ನ ಹೋಗುತ್ತದೆ. ಕೋಳಿ ಸಾಗಿಸಿ ವಾಪಸ್ ಆಗುವ ಖಾಲಿ ವಾಹನಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಜೊತೆಗೆ ಒಂದು ಪರ್ಸೆಂಟ್ ಹೈಪೋಕ್ಲೋರೈಡ್ ಸಿಂಪಡಣೆ ಮಾಡಲಾಗುತ್ತಿದೆ. ಕೊಡಗಿನಲ್ಲಿ ಇದುವರೆಗೆ ಹಕ್ಕಿಜ್ವರದ ಲಕ್ಷಣ ಕಂಡುಬಂದಿಲ್ಲ. ಆದರೂ ಹೈಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.