ಮೈಸೂರು: ಮೈಸೂರು ನಗರವೂ ಸೇರಿದಂತೆ ತಾಲೂಕಿನ ಹಲವು ಬಡಾವಣೆಗಳು ಮತ್ತು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಹಳೇ ಉಂಡವಾಡಿ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಚಾಲನೆ ಸಿಕ್ಕಿದೆ.
ಶಾಸಕ ಜಿ.ಟಿ.ದೇವೇಗೌಡ ಅವರು, ಅಧಿಕಾರಿಗಳು ಮತ್ತು ಎಂಜಿನಿಯರುಗಳ ಜೊತೆ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಜಿಟಿಡಿ, ಕಳೆದ ಏಳು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಹಳೇ ಉಂಡವಾಡಿ ಯೋಜನೆ ಕಾಮಗಾರಿ ಪ್ರಾರಂಭಗೊಂಡಿದೆ. ಈ ಯೋಜನೆಗೆ 545 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಎಚ್.ಡಿ ಕುಮಾರಸ್ವಾಮಿ ಅಧಿಕಾರವಧಿಯಲ್ಲಿ 350 ಕೋಟಿ ರೂಪಾಯಿ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರಲ್ಲಿ ಶೀಘ್ರವೇ ಡೆಲ್ಟಾ ಪ್ಲಸ್ ಪರೀಕ್ಷಾ ಲ್ಯಾಬ್ ಆರಂಭ
ಈ ಯೋಜನೆ ಪೂರ್ಣಗೊಂಡರೆ ಮೈಸೂರು ನಗರ ಮತ್ತು ತಾಲೂಕಿನ ಗ್ರಾಮಗಳು, ಹುಣಸೂರು ತಾಲೂಕು ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸೇರಿದಂತೆ ತಾಲೂಕಿನ ಹಲವಾರು ಹಳ್ಳಿಗಳಿಗೆ ನಿರಂತರ ಕುಡಿಯುವ ನೀರು ಲಭ್ಯವಾಗಲಿದೆ. ಮೈಸೂರು ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಈ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕಿದೆ. ಇದಕ್ಕಾಗಿ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸುವಂತೆ ನಗರಾಭಿವೃದ್ಧಿ ಸಚಿವರು, ಮೈಸೂರು ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುತ್ತೇನೆ. ಜುಲೈ ತಿಂಗಳ ಮೊದಲ ವಾರದಲ್ಲಿ ಸಚಿವರು ಕಾಮಗಾರಿ ಪರಿಶೀಲಿಸಲು ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ಜಿಟಿಡಿ ಮಾಹಿತಿ ಹಂಚಿಕೊಂಡರು.