– ಕ್ಷೇತ್ರಕ್ಕೆ ಬಂದಿಲ್ಲ, ಆದ್ರೆ ಅಭಿವೃದ್ಧಿ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ
– ನಿಮ್ಮ ಅಭಿಪ್ರಾಯ ಕೇಳದೇ ಕ್ಷೇತ್ರ ಬದಲಿಸಲ್ಲ
ಬೆಂಗಳೂರು: ಮೈಸೂರಿನಿಂದ ಬಂದ ನನ್ನನ್ನು ಗೆಲ್ಲಿಸಿದ ಬಾದಾಮಿ ಕ್ಷೇತ್ರದ ಜನರನ್ನು ಮನರೆಯಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಂದಿನ ಬಾರಿ ಚುನಾವಣೆಗೂ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕೆಂದು ಮನವಿ ಮಾಡಲು ಕ್ಷೇತ್ರದ ಸುಮಾರು 500ಕ್ಕೂ ಹೆಚ್ಚು ಜನ ಸಿದ್ದರಾಮಯ್ಯನವರ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ತಮ್ಮ ಕ್ಷೇತ್ರದ ಜನರನ್ನು ಉದ್ದೇಶಿಸಿ ಸಿದ್ದರಾಮಯ್ಯನವರು ಮಾತನಾಡಿದರು. ನೀವು ಬೆಂಗಳೂರಿಗೆ ಬರುವ ವಿಷಯ ತಿಳಿದಾಗ ಬೇಡ ಅಂತ ಹೇಳಿದ್ದೆ. ನಾನೇ ಜುಲೈ 9 ರಂದು ಭೇಟಿ ಆಗ್ತೀನಿ ಅಂದ್ರೂ ಬಂದಿರುವ ನಿಮ್ಮ ಅಭಿಮಾನಕ್ಕೆ ಚಿರಋಣಿ. ಚಾಮರಾಜಪೇಟೆಗೆ ಬನ್ನಿ ಎಂದು ಜಮೀರ್ ಅಭಿಮಾನದಿಂದ ಕರೆಯುತ್ತಾರೆ. ಹಾಗೆ ಬಾಗಲಕೋಟಿ, ಕೊಪ್ಪಳ ಮತ್ತು ಕೊಲಾರ ಕ್ಷೇತ್ರದಿಂದಲೂ ಆಹ್ವಾನ ನೀಡಿದ್ದಾರೆ. ಆದ್ರೆ ಎಲ್ಲಿಯೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಅಂತ ಹೇಳಿಲ್ಲ ಎಂದರು.
Advertisement
Advertisement
ಬೇರೆ ಕಡೆ ಹೋಗ್ತಿನಾ?: ವಿಪಕ್ಷ ನಾಯಕನಾಗಿರೋದರಿಂದ ಪಕ್ಷದ ಕೆಲಸಗಳು ಇರೋದರಿಂದ ಪದೇ ಪದೇ ಕ್ಷೇತ್ರಕ್ಕೆ ಬರಲು ಆಗುತ್ತಿಲ್ಲ. ಆದ್ರೆ ಕ್ಷೇತ್ರ ಅಭಿವೃದ್ಧಿ ಕೆಲಸಗಳಲ್ಲಿ ಹಿಂದೆ ಬಿದ್ದಿಲ್ಲ. ಬಾದಾಮಿ ಶಾಸಕನಾಗಿ ಕ್ಷೇತ್ರದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಮೈಸೂರಿನಿಂದ ಬಂದ ನನ್ನನ್ನ ಬಾದಾಮಿಯಲ್ಲಿ ಗೆಲ್ಲಿಸಿದ್ದೀರಿ. ಚುನಾವಣೆ ವೇಳೆ ಕೇವಲ ಎರಡು ಬಾರಿ ಕ್ಷೇತ್ರಕ್ಕೆ ಬಂದ್ರೂ ನನ್ನ ಗೆಲ್ಲಿಸಿದ್ದೀರಿ. ನಿಮ್ಮ ಅಭಿಪ್ರಾಯ ತೆಗೆದುಕೊಳ್ಳದೇ ಬೇರೆ ಕಡೆ ಹೋಗ್ತಿನಾ? ಒಂದು ವೇಳೆ ಹೋಗುವ ಸಂದರ್ಭ ಬಂದರೆ ನಿಮ್ಮ ನಿಮ್ಮನ್ನು ಕೇಳದೇ ಹೋಗಲ್ಲ ಎಂದು ಭರವಸೆ ನೀಡಿದರು.
Advertisement
Advertisement
ಎಷ್ಟು ನಮಸ್ಕಾರ ಹೇಳಿದರೂ ಕಡಿಮೆಯೇ: ಚುನಾವಣೆಗೆ ಇನ್ನೂ ಒಂದು ವರ್ಷ 10 ತಿಂಗಳು ಇದೆ. ನಾನು ಬಾದಾಮಿ ಕ್ಷೇತ್ರದ ಶಾಸಕ ನಾನು ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಅಸೆಂಬ್ಲಿಯಲ್ಲಿಯೇ ಹೇಳಿದ್ದೇನೆ. ಬಾದಾಮಿ ಕ್ಷೇತ್ರದ ಜನತೆ ಒಳ್ಳೆಯ ಜನತೆ. ನಿಮ್ಮನ್ನು ಖುಷಿಪಡಿಸಲು ನಾನು ಹೇಳುತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಲ್ಲರೂ ಸೇರಿ ದ್ವೇಷದಿಂದ ಸೋಲಿಸಿದ್ದರು. ದೂರದಿಂದ ಬಂದ ನನ್ನನ್ನು ನೀವು ಗೆಲ್ಲಿಸಿದ್ದೀರಿ. ನಾನು ಎಷ್ಟು ನಮಸ್ಕಾರ ಹೇಳಿದರೂ ಕಡಿಮೆಯೇ, ನಾನು ಬಾದಾಮಿ ಜನತೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಶಾಸಕರಾದ ಜಮೀರ್ ಅಹಮ್ಮದ್ ಖಾನ್ ತಮ್ಮ ಕ್ಷೇತ್ರ ಚಾಮರಾಜಪೇಟೆಗೆ ಬನ್ನಿ ಎಂದು ಸಿದ್ದರಾಮಯ್ಯನವರಿಗೆ ಆಹ್ವಾನ ನೀಡುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿಯೇ ಸ್ಪರ್ಧೆ ಮಾಡುವಂತೆ ಹೇಳಿರೋದು ಜಮೀರ್ ಅವರ ವೈಯಕ್ತಿಕ ವಿಚಾರ. ಆದರೆ ಸಿದ್ದರಾಮಯ್ಯ ಯಾವ ಕಾರಣಕ್ಕೂ ಚಾಮರಾಜಪೇಟೆಗೆ ಹೋಗಬಾರದು, ಮತ್ತೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಮುಂದೆ ಮುಖ್ಯಮಂತ್ರಿ ಆಗಬೇಕು. ಅವರು ಸಿಎಂ ಆಗೋ ಅವಕಾಶ ಇದೆ. ಹಾಗಾಗಿ ಬಾದಾಮಿಯಿಂದಲೆ ಸ್ಪರ್ಧೆ ಮಾಡಿ ಅವರು ಸಿಎಂ ಆಗಬೇಕು. ಯಾವ ಕಾರಣಕ್ಕೂ ಅವರು ಬೇರೆ ಕಡೆ ಹೋಗಬಾರದು. ಅವರು ಒಪ್ಪಿಕೊಳ್ಳದಿದ್ದರೆ ಇಲ್ಲೇ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಬೆಂಬಲಿಗರು ಹೇಳಿದ್ದಾರೆ. ಮಾಜಿ ಸಿಎಂ ನಿವಾಸದ ಮುಂದೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿರುವ ಬೆಂಬಲಿಗರು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾದಾಮಿ ಹುಲಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗುತ್ತಿದ್ದಾರೆ.