ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ವಾರಿಯರ್ಸ್ ಸರ್ಕಾರದ ವಿರುದ್ಧ ಸಿಡಿದೆದ್ದು, ಮೌನ ಪ್ರತಿಭಟನೆಗೆ ಇಳಿದಿದ್ದಾರೆ.
ಕಳೆದ ಹದಿನೈದು ದಿನದಿಂದ ಕೋವಿಡ್ ವಾರಿಯರ್ಸ್ ಪ್ರತಿಭಟನೆ ಮಾಡುತ್ತಿದ್ದಾರೆ. ಸೋಮವಾರ ರಾತ್ರಿ ನಗರದ ಬೆಂಗಳೂರು ಮೆಡಿಕಲ್ ಕಾಲೇಜ್ ವಿಕ್ಟೋರಿಯಾ ಆವರಣದಲ್ಲಿ ವೈದ್ಯಕೀಯ ಸಿಬ್ಬಂದಿ ಮೇಣದ ಬತ್ತಿ ಹಿಡಿದು ಆಸ್ಪತ್ರೆಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು. ಜೊತೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದಾರೆ.
ಖಾಯಂ ನೌಕರರಿಗೆ ವೇತನ ಹೆಚ್ಚಳ, ಮೂಲಭೂತ ಸೌಕರ್ಯ, ಪಿಂಚಣಿ ವ್ಯವಸ್ಥೆ ಸೇರಿದಂತೆ ಅನೇಕ ಬೇಡಿಕೆಯನ್ನು ಮುಂದಿಟ್ಟು ರಾತ್ರಿ ಆಸ್ಪತ್ರೆಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕಿಮ್ಸ್ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ
ಇತ್ತ ಹುಬ್ಬಳ್ಳಿಯಲ್ಲಿ ಎನ್‍ಪಿಎಸ್ ಸೌಲಭ್ಯ ಸೇರಿದಂತೆ ಜ್ಯೋತಿ ಸಂಜೀವಿನಿ ಒದಗಿಸುವಂತೆ ಆಗ್ರಹಿಸಿ ಕಿಮ್ಸ್ ಶುಶ್ರೂಷಾ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಸಿಬ್ಬಂದಿ ಸೋಮವಾರ ಸಂಜೆ ಕೂಡ ಕಪ್ಪು ಪಟ್ಟಿ ಧರಿಸಿ, ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.
ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆವರಣದ ಎದುರು ಕಪ್ಪು ಪಟ್ಟಿ ಧರಿಸಿ ಕೋವಿಡ್ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದೆ ಕಾರ್ಯ ಮಾಡಿದ್ದೇವೆ. ಪಿಂಚಣಿ ಸೌಲಭ್ಯವನ್ನು ನಮಗೂ ನೀಡಿ ಎಂದು ಒತ್ತಾಯಿಸಿದರು. ಅಲ್ಲದೇ ವೈದ್ಯಕೀಯ ವಿದ್ಯಾಲಯದಲ್ಲಿ ಹಾಗೂ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಾರತಮ್ಯವನ್ನು ನಿಭಾಯಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.