ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪ್ರಸ್ತುತ ಎಲ್ಲ ಅಗತ್ಯ ಮೂಲಸೌಲಭ್ಯಗಳು ಲಭ್ಯವಿದ್ದು, ವೈದ್ಯಕೀಯ ಸೇವೆಯನ್ನು ಇನ್ನಷ್ಟು ಉತ್ತಮಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಸರ್ಕಾರಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ, ಕೋವಿಡ್ ನಿರ್ವಹಣೆ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಹಾಗೂ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ವೈದ್ಯರ ಕೊರತೆ ಉಂಟಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಲಭ್ಯವಿರುವ ನರ್ಸ್‍ಗಳಿಂದ ಸಮರ್ಪಕವಾದ ಸೇವೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಸಿಮ್ಸ್ ನ ವಿವಿಧ ವಿಭಾಗಗಳ ಮುಖ್ಯಸ್ಥರು ಕಡ್ಡಾಯವಾಗಿ ಪ್ರತಿದಿನ ಕರ್ತವ್ಯಕ್ಕೆ ಹಾಜರಾಗಬೇಕು. ವಿವಿಧ ವಾರ್ಡ್‍ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ವೈದ್ಯರ ಹೆಸರನ್ನು ಆಯಾ ವಾರ್ಡ್ ಹೊರಗೆ ಪ್ರತಿದಿನ ಪ್ರಕಟಿಸಬೇಕು. ಕರ್ತವ್ಯ ಲೋಪ ಎಸಗುವ ವೈದ್ಯರ ವಿರುದ್ಧ ಬಿಗಿ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ಇದೇ ವೇಳೆ ಕೋವಿಡ್ ಕಪ್ರ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಎಂಎಲ್‍ಸಿ ಆಯನೂರು ಮಂಜುನಾಥ್, ಆರ್.ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ.ಸಿಇಒ ಎಂ.ಎಲ್.ವೈಶಾಲಿ, ಡಿಎಚ್ ಒ ಡಾ.ರಾಜೇಶ್ ಸುರಗಿಹಳ್ಳಿ ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಉಪಸ್ಥಿತರಿದ್ದರು.