ಕೋಲ್ಕತ್ತಾ: ಮಹಿಳೆಯೊಬ್ಬಳು ತನಗೆ ಉದ್ಯೋಗ ನೀಡಿದ ಮಾಲೀಕ ಮೃತಪಟ್ಟ ಬಳಿಕ ಆತನ ಎಟಿಎಂನಿಂದಲೇ ಬರೋಬ್ಬರಿ 35 ಲಕ್ಷಕ್ಕೂ ಅಧಿಕ ಹಣ ಡ್ರಾ ಮಾಡಿದ ಘಟನೆಯೊಂದು ನಡೆದಿದೆ.
ಆರೋಪಿ ಮಹಿಳೆಯನ್ನು ರಿತಾ ರಾಯ್ ಎಂದು ಗುರುತಿಸಲಾಗಿದ್ದು, ಈಕೆ ಕಳೆದ 7 ವರ್ಷಗಳಿಂದ ಸತ್ಯನಾರಾಯಣ್ ಅಗರ್ವಾಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಹಣ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಸತ್ಯನಾರಾಯಣ್ ಅವರು ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮೃತಪಟ್ಟಿದ್ದಾರೆ. ಆ ಬಳಿಕ ನಕಶಿಪರ ನಿವಾಸಿಯಾಗಿರುವ ರಾಯ್, ತನ್ನ ಸಂಬಂಧಿಕರ ಸಹಾಯ ಪಡೆದು ತನ್ನ ಮಾಲೀಕನ ಎಟಿಎಂನಿಂದಲೇ 34,90,000 ಹಣ ಪೀಕಿದ್ದಾಳೆ.
Advertisement
Advertisement
ಸತ್ಯನಾರಾಯಣ್ ಅವರು ಲಾಕ್‍ಡೌನ್ ಆದ ಮೊದಲ ವಾರದಲ್ಲಿ ತೀರಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಅವರು, ಪ್ರಿನ್ಸ್ ಅನ್ವರ್ ಷಾ ರಸ್ತೆಯ ಸಿಟಿ ಹೈನಲ್ಲಿರುವ ಮನೆಯಲ್ಲಿಯೇ ಇದ್ದರು. ಸತ್ಯನಾರಾಯಣ್ ಮೃತಪಟ್ಟ ಸಂದರ್ಭದಲ್ಲಿ ರಾಯ್, ಅವರ ಬಳಿಯಿದ್ದ ಎಟಿಎಂ ಕಾರ್ಡ್ ಕದ್ದಿದ್ದಾಳೆ. ಅಲ್ಲದೆ ಆ ಬಳಿಕದಿಂದಲೇ ಹಣ ಡ್ರಾ ಮಾಡಲು ಆರಂಭಿಸಿದ್ದಾಳೆ. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಯಾರೂ ಬ್ಯಾಂಕಿಗೆ ಹೋಗುತ್ತಿರಲಿಲ್ಲ. ಹೀಗಾಗಿ ಸತ್ಯನಾರಾಯಣ್ ಕುಟುಂಬಕ್ಕೆ ಹಣ ಡ್ರಾ ಮಾಡಿರುವ ವಿಚಾರವೂ ಗೊತ್ತಾಗಿರಲಿಲ್ಲ.
Advertisement
Advertisement
ಇತ್ತ ಬ್ಯಾಂಕಿನಿಂದ ಸತ್ಯನಾರಾಯಣ್ ಅವರ ಮೊಬೈಲ್ ಗೆ ಮೆಸೇಜ್ ಗಳು ಬರುತ್ತಲೇ ಇತ್ತು. ಆದರೆ ಸತ್ಯನಾರಾಯಣ್ ತೀರಿಕೊಂಡ ಬಳಿಕ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. ಹೀಗಾಗಿ ಅವರ ಅಕೌಂಟಿನಿಂದ ಹಣ ಹೋಗುತ್ತಿರುವ ವಿಚಾರ ಕುಟುಂಬದ ಗಮನಕ್ಕೆ ಬಂದಿರಲಿಲ್ಲ. ಸತ್ಯನಾರಾಯಣ್ ಅವರ ಮಗ ಇನ್ನೊಂದು ಫ್ಲ್ಯಾಟ್‍ನಲ್ಲಿ ವಾಸವಾಗಿದ್ದನು. ಮೃತರು ಬಳಸಿದ ಮೊಬೈಲ್ ಸಂಖ್ಯೆ ಸ್ವಿಚ್ಛ್ ಆಫ್ ಆಗಿದ್ದರಿಂದ ಬ್ಯಾಂಕ್ ಅವರ ಕುಟುಂಬದ ಸದಸ್ಯರಿಗೆ ಮೆಸೇಜ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸಲು ಆರಂಭಿಸಿತ್ತು.
ಜೂನ್ 1ರಂದು ಸತ್ಯನಾರಾಯಣ್ ಪುತ್ರ ಅನುರಾಗ್ ಬ್ಯಾಂಕಿಗೆ ತೆರಳಿ ಖಾತೆಯ ವಿವರಗಳನ್ನು ತೆಗೆದುಗೊಂಡಾಗ ಮಹಿಳೆ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಎಟಿಎಂ ಸಿಸಿಟಿವಿಗಳನ್ನು ಪರೀಶಿಲಿಸಿದಾಗ ಇಬ್ಬರು ವ್ಯಕ್ತಿಗಳೊಂದಿಗೆ ಮಹಿಳೆ ಹಣ ಡ್ರಾ ಮಾಡುತ್ತಿರುವುದು ಬಯಲಾಗಿದೆ. ಸದ್ಯ ಘಟನೆ ಸಂಬಂಧಪಟ್ಟಂತೆ ಆರೋಪಿಗಳನ್ನು ಆಗಸ್ಟ್ 13ರಂದು ಬಂಧಿಸಲಾಗಿದ್ದು, ಆರೋಪಗಳಿಂದ 27 ಲಕ್ಷ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.