-ಮೂರು ಮಕ್ಕಳು ಸಾವು
ಬಾಗಲಕೋಟೆ: ಮೂರು ಮಕ್ಕಳಿಗೆ ವಿಷವುಣಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ನಡೆದಿದೆ. ಮೂರು ಮಕ್ಕಳು ಸಾವನ್ನಪ್ಪಿದ್ದು, ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಾನಿ (13), ಶಂಕರ್ (9), ಸುಹಾಸಿನಿ (7) ಮೃತ ಮಕ್ಕಳು. ಮಕ್ಕಳಿಗೆ ವಿಷ ನೀಡಿದ ತಾಯಿ ಭಾಗೀರಥಿ ಚಿಕ್ಕಯ್ಯ ಮಠದಳನ್ನು ಮಹಲಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾಗೀರಥಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮೂರು ವರ್ಷಗಳ ಹಿಂದೆ ಮಠದ ಆಸ್ತಿ ವಿಚಾರವಾಗಿ ಭಾಗೀರಥಿ ಪತಿಯ ಕೊಲೆಯಾಗಿತ್ತು. ಅಂದಿನಿಂದ ಭಾಗೀರಥಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಹೇಳಲಾಗುತ್ತಿದೆ. ಇದೀಗ ಮಕ್ಕಳನ್ನು ಕೊಂದ ಭಾಗೀರಥಿ ವಿಷ ಸೇವನೆ ಮಾಡಿದ್ದಾಳೆ ಎನ್ನಲಾಗಿದೆ. ಆದ್ರೆ ಪ್ರಕರಣಕ್ಕೆ ನೈಜ ಕಾರಣ ತಿಳಿದು ಬಂದಿಲ್ಲ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಭಾಗೀರಥಿ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ.