– ಇದೂವರೆಗೂ ಆಗಿದೆ 4 ಲಕ್ಷ ರೂ. ಬಿಲ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸದ ನಡುವೆ, ಖಾಸಗಿ ಆಸ್ಪತ್ರೆಗಳ ಕೊರೊನಾ ಪಾಸಿಟಿವ್, ನೆಗೆಟಿವ್ ಮಿಸ್ಟರಿಯೊಂದು ಬಯಲಾಗಿದೆ.
ಹೌದು. ಮೂರು ಬಾರಿ ನೆಗೆಟಿವ್ ಬಂದ ರೋಗಿಗೆ ಖಾಸಗಿ ಆಸ್ಪತ್ರೆಯಲ್ಲಿ ಪಾಸಿಟಿವ್ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಬಿಬಿಎಂಪಿ ವರದಿಯಲ್ಲಿ ನೆಗೆಟಿವ್ ಎಂದು ಬಂದಿದ್ದು, ಆದರೆ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಮಾತ್ರ ಪಾಸಿಟಿವ್ ಎಂದು ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಆಸ್ಪತ್ರೆ ಸಿಬ್ಬಂದಿ ಪಾಸಿಟಿವ್ ರಿಪೋರ್ಟ್ ಮಾತ್ರ ಕೊಡ್ತಿಲ್ಲ. ಆದರೆ ರೋಗಿಯ ನೆಗೆಟಿವ್ ರಿಪೋರ್ಟ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಏನಿದು ಘಟನೆ?
52 ವರ್ಷದ ವ್ಯಕ್ತಿ ಜುಲೈ 21 ರಂದು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಉಸಿರಾಟದ ಸಮಸ್ಯೆ ಅಂತ ಹೋಗಿದ್ದಾರೆ. ನಂತರ ಅಲ್ಲಿನ ವೈದ್ಯರು ಟೆಸ್ಟ್ ಮಾಡಿ ಎಕ್ಸ್ ರೇ ಮಾಡಬೇಕು ಅಂದಿದ್ದಾರೆ. ಎಕ್ಸ್ ರೇ ಮಾಡಿದ ವೈದ್ಯರು, ರೋಗಿಗೆ ಸಾಕಷ್ಟು ಸಮಸ್ಯೆ ಇದೆ ಎಮರ್ಜೆನ್ಸಿ ವಾರ್ಡಿಗೆ ಶಿಫ್ಟ್ ಮಾಡಬೇಕು ಅಂದಿದ್ದಾರೆ.
Advertisement
ಅಲ್ಲದೆ ಸಂಜೆ ಒಂದು ಲಕ್ಷ ರುಪಾಯಿ ಹಣ ಕಟ್ಟಲು ಹೇಳಿದ್ದಾರೆ. ವೈದ್ಯರ ಮಾತು ನಂಬಿದ ಕುಟುಂಬಸ್ಥರು 23 ರಂದು ಬೆಳಗ್ಗೆ ಒಂದು ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ. ಜುಲೈ 16ರಂದು ರೋಗಿಗೆ ಮತ್ತಿಕೆರೆ ಬಿಬಿಎಂಪಿ ಕಚೇರಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ ಅಲ್ಲಿ ನೆಗೆಟಿವ್ ಎಂದು ವರದಿ ಬಂದಿದೆ.
Advertisement
ಎರಡು ದಿನಗಳವರೆಗೆ ಬ್ಯಾಪಿಸ್ಟ್ ನಲ್ಲಿಯೇ ಚಿಕಿತ್ಸೆ ನೀಡಿದ್ದು, 25 ರಂದು ಕೋವಿಡ್ ಟೆಸ್ಟ್ ಮಾಡಬೇಕು ಅಂತ ಸ್ವಾಬ್ ತೆಗೆದುಕೊಂಡಿದ್ದಾರೆ. ರಾತ್ರಿ 8 ಗಂಟೆ ವೇಳೆಗೆ ಮೊಬೈಲ್ ಗೆ ರಿಪೋರ್ಟ್ ನೆಗೆಟಿವ್ ಅಂತ ಬಂದಿದೆ. ಆಗಸ್ಟ್ 2ರಂದು ಮತ್ತೆ ಕೋವಿಡ್ ಟೆಸ್ಟ್ ಮಾಡಲು ಸ್ವಾಬ್ ತೆಗೆದುಕೊಂಡಿದ್ದಾರೆ.
ಆಗಸ್ಟ್ 4ರಂದು ಬೆಳಗ್ಗೆಯೇ ನಿಮಗೆ ಪಾಸಿಟಿವ್ ಅಂತ ಹೇಳಿ ಸಂಜೆ ಕೊರೊನಾ ಸೋಂಕಿತರು ಇರುವ ವಾರ್ಡಿಗೆ ಶಿಫ್ಟ್ ಮಾಡಿದ್ದಾರೆ. ಕುಟುಂಬಸ್ಥರು ಪಾಸಿಟಿವ್ ರಿಪೋರ್ಟ್ ಕೇಳಿದ್ರೆ ಆಸ್ಪತ್ರೆಯವರು ಡಾಕ್ಟರ್ ಬಳಿ ಇದೆ ನಮ್ಮ ಬಳಿ ಇಲ್ಲ ಅಂದಿದ್ದಾರೆ. ಆದರೆ ಇತ್ತ ರೋಗಿಯ ಮೊಬೈಲ್ ಗೆ ಕೊರೊನಾ ನೆಗೆಟಿವ್ ಅಂತ ರಿಪೋರ್ಟ್ ಬಂದಿದೆ.
ಸಂಜೆ ವೇಳೆಗೆ ಮಲ್ಲೇಶ್ವರಂ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಗೆ ಹೋಗಿ ಕೇಳಿದ್ರೆ ಅಲ್ಲಿ ರೋಗಿಗೆ ನೆಗೆಟಿವ್ ಅಂತ ಮಾಹಿತಿ ನೀಡಿದ್ದಾರೆ. ಆದರೂ ಆಸ್ಪತ್ರೆಯವರು ಕೋವಿಡ್ ರೋಗಿಗಳ ವಾರ್ಡ್ ನಲ್ಲೇ ಚಿಕಿತ್ಸೆ ಕೊಡ್ತಿದ್ದಾರೆ. ಇಲ್ಲಿಯವರೆಗೆ ಆಸ್ಪತ್ರೆಯ ಬಿಲ್ 4 ಲಕ್ಷ ರುಪಾಯಿವರೆಗೆ ಆಗಿದೆ. ಕುಟುಂಬಸ್ಥರು ಎರಡು ಲಕ್ಷದ ಐವತ್ತು ಸಾವಿರ ರುಪಾಯಿ ಹಣ ಕಟ್ಟಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಭೀಕರತೆಯ ಮಧ್ಯೆ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಒಂದೊಂದಾಗಿಯೇ ಬಯಲಾಗುತ್ತಿದೆ.