ತುಮಕೂರು: ಜಿಲ್ಲೆಯ ರಾಜಕೀಯದಲ್ಲಿ ಹಾವು ಮುಂಗಸಿಯಂತಿದ್ದ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರಾದ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಗೂ ಮಾಜಿ ಸಚಿವ ಟಿ.ಬಿ ಜಯಚಂದ್ರ ದ್ವೇಷ ಮರೆತು ಒಂದಾಗಿದ್ದಾರೆ.
ಇಂದು ಕ್ಯಾತಸಂದ್ರದಲ್ಲಿರುವ ಕೆ.ಎನ್ ರಾಜಣ್ಣರ ಮನೆಗೆ ಭೇಟಿ ನೀಡಿದ ಟಿ.ಬಿ ಜಯಚಂದ್ರ ಶಿರಾ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಕೋರಿದರು. ಅಲ್ಲದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಐದನೇ ಬಾರಿ ಗೆದ್ದು ಅಧ್ಯಕ್ಷರಾಗಿದ್ದಕ್ಕೆ ರಾಜಣ್ಣಗೆ ಶುಭಾಶಯ ಕೋರಿದರು.
ಜೆಡಿಎಸ್ ಶಾಸಕ ಸತ್ಯನಾರಾಯಣ್ ಅವರ ನಿಧನದಿಂದ ತೆರವಾದ ಶಿರಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿ ಚುನಾವಣೆ ತಂತ್ರಗಾರಿಕೆ ನಡೆಸಿದ್ದಾರೆ. ಜಯಚಂದ್ರಗೆ ಬೆಂಬಲ ನೀಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ರಾಜಣ್ಣಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿರಾ ಚುನಾವಣೆಯಲ್ಲಿ ಜಯಚಂದ್ರಗೆ ಬೆಂಬಲ ನೀಡಲು ಕೆ.ಎನ್ ರಾಜಣ್ಣ ಸಹಮತ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜಣ್ಣ ನನ್ನ ಮತ್ತು ಜಯಚಂದ್ರರ ನಡುವೆ ಯಾವುದೇ ವೈಯಕ್ತಿಯ ದ್ವೇಷ ಇರಲಿಲ್ಲ. ಕೇವಲ ರಾಜಕೀಯ ಭಿನ್ನಾಭಿಪ್ರಾಯ ಅಷ್ಟೇ ಇದ್ದವು. ಪಕ್ಷದ ರಾಜ್ಯ ಮುಖಂಡರು ಹೇಳಿದಂತೆ ಶಿರಾ ಉಪಚುನಾವಣೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಈ ಉಪ ಚುನಾವಣೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎದುರಿಸುತ್ತಿರುವ ಮೊದಲ ಚುನಾವಣೆ. ಇಲ್ಲಿನ ಗೆಲುವು ಜಯಚಂದ್ರ ಅನ್ನೋದಕ್ಕಿಂತ ಪಕ್ಷದ ಗೆಲುವಿಗಾಗಿ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಮಾಜಿ ಸಚಿವ ಜಯಚಂದ್ರ ಮಾತನಾಡಿ ತುಮಕೂರು ರಾಜಕಾರಣದಲ್ಲಿ ನಾನು ಮತ್ತು ರಾಜಣ್ಣ ಜೋಡೆತ್ತು ಇದ್ದಹಾಗೆ. 50 ವರ್ಷದಿಂದ ತುಮಕೂರು ಕಾಂಗ್ರೆಸ್ ನಲ್ಲಿ ರಾಜಕಾರಣದಲ್ಲಿ ಉಳಿದವರು ನಾವಿಬ್ಬರೆ. ಹಾಗಾಗಿ ಐದು ದಶಕದ ಅವಧಿಯಲ್ಲಿ ಒಂದೇ ಪಕ್ಷದಲ್ಲಿ ಇರಬೇಕಾದರೆ ಕೆಲವೊಮ್ಮೆ ವ್ಯತ್ಯಾಸಗಳು, ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಅದನ್ನೆಲ್ಲಾ ಮರೆತು ಈಗ ಒಂದಾಗಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.