– ದಕ್ಷಿಣ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿರುವ ಹವಾಮಾನ ಇಲಾಖೆಯ ನಿರ್ದೇಶಕ ರಮೇಶ್ ಬಾಬು, ಇವತ್ತು ಸಾಯಂಕಾಲ ಅಥವಾ ರಾತ್ರಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ನಾಳೆ ಹಾಗೂ ನಾಡಿದ್ದು ಸಿಲಿಕಾನ್ ಸಿಟಿಗೆ ಭಾರೀ ಮಳೆ ಅಪ್ಪಳಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಪುದುಚೇರಿಯ ಹತ್ತಿರ ಸುಮಾರು 450 ಕಿ.ಮೀ ದೂರದಲ್ಲಿ ಸೈಕ್ಲೋನ್ ಅಬ್ಬರಿಸುತ್ತಿದೆ. ಹೀಗಾಗಿ ನಾಳೆ ಹಾಗೂ ನಾಡಿದ್ದು ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ. ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದೇವೆ. ಮಂಡ್ಯ, ಮೈಸೂರು, ಹಾಸನ, ರಾಮನಗರ, ಬೆಂಗಳೂರು ನಗರ, ಉತ್ತರ ಕನ್ನಡ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹೇಳಿದ್ದಾರೆ.
Advertisement
Advertisement
ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನ.25 ರಂದು ತಮಿಳುನಾಡು ಹಾಗೂ ಪಾಂಡಿಚೇರಿ ಕರಾವಳಿಯಲ್ಲಿ ದಾಟಿ ಕಾರೈಕಲ್, ಮಾಮಲಪುರಂ ಹತ್ತಿರ ನಿವಾರ್ ಸೈಕ್ಲೋನ್ ದಾಟಲಿದೆ. ಇದರ ಪ್ರಭಾವದಿಂದಾಗಿ ಕರಾವಳಿಯ ಕೆಲ ಭಾಗದಲ್ಲಿ ನ.25, 26, 27 ರಂದು ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ನ. 23ರಂದು ಒಣ ಹವೆ ಇರಲಿದ್ದು, ನ. 24 ರಿಂದ 27 ರವರೆಗೆ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ.
ಅಲರ್ಟ್ ಲೆಕ್ಕಾಚಾರ ಹೇಗೆ?
64.5 ಮಿ.ಮೀ ನಿಂದ 115.5 ಮಿ.ಮೀ ಒಳಗಡೆ ಮಳೆಯಾಗುವ ಸಾಧ್ಯತೆ ಇದ್ದರೆ ಯೆಲ್ಲೋ ಅಲರ್ಟ್ ಘೋಷಣೆಯಾಗುತ್ತದೆ. 115.6 ಮಿ.ಮೀ ನಿಂದ 204.4 ಮಿ.ಮೀ. ಒಳಗಡೆ ಮಳೆಯಾಗಲಿದ್ದರೆ ಆರೆಂಜ್ ಅಲರ್ಟ್ ಎಂದು ಪ್ರಕಟಿಸಲಾಗುತ್ತದೆ. 204.5 ಮಿ.ಮೀಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದ್ದರೆ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತದೆ.