ಅಬುಧಾಬಿ: ಮುಂದಿನ ವರ್ಷದ ಐಪಿಎಲ್ ಟೂರ್ನಿಯಿಂದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿಲಿಯರ್ಸ್ ಅವರನ್ನು ಬ್ಯಾನ್ ಮಾಡಬೇಕು ಎಂದು ಹೇಳುವ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್, ಕೊಹ್ಲಿ ಅವರ ಕಾಲೆಳೆದಿದ್ದಾರೆ.
ಕೆಎಲ್ ರಾಹುಲ್ ಇನ್‍ಸ್ಟಾ ಚಾಟ್ ಮಾಡುವ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ್ದು, ಐಪಿಎಲ್‍ನಲ್ಲಿ ನೀವು ನೋಡಲು ಬಯಸುವ ಬದಲಾವಣೆಗಳು ಯಾವುವು ಎಂಬ ಕೊಹ್ಲಿ ಪ್ರಶ್ನೆಗೆ ರಾಹುಲ್ ಉತ್ತರಿಸಿದ್ದಾರೆ. ಐಪಿಎಲ್‍ನಲ್ಲಿ 5 ಸಾವಿರ ರನ್ ಗಳಿಸಿದ ಆಟಗಾರರನ್ನು ಬ್ಯಾನ್ ಮಾಡಬೇಕು. ಇದರಲ್ಲಿ ಕೊಹ್ಲಿ, ಎಬಿಡಿ ಕೂಡ ಸೇರಿದ್ದಾರೆ. ಇದರಿಂದ ಉಳಿದವರಿಗೂ ಸಾಧನೆ ಮಾಡಲು ಅವಕಾಶ ಸಿಗುತ್ತೆ ಅಂತಾ ಹೇಳಿದ್ದಾರೆ.
ನೀವು ಬೌಲರ್ ಆಗಿದ್ದರೆ, ಈ ಇಬ್ಬರು ಆಟಗಾರರಿಂದ ರನ್ ಚಚ್ಚಿಸಿಕೊಂಡಿದ್ದರೇ ನನ್ನ ಸಲಹೆಯನ್ನು ನೀವು ನಿರ್ಲಕ್ಷ್ಯ ಮಾಡುವುದಿಲ್ಲ. ಯಾವುದೇ ಆಟಗಾರ 100 ಮೀಟರ್ ಗೂ ಹೆಚ್ಚು ದೂರ ಸಿಕ್ಸರ್ ಸಿಡಿಸಿದರೆ ಅದಕ್ಕೆ ಹೆಚ್ಚು ರನ್ ನೀಡಬೇಕು. ಈ ಬಗ್ಗೆ ನಮ್ಮ ಬೌಲರ್ ಗಳನ್ನು ಕೇಳುತ್ತೇನೆ ಎಂದು ಕೆಎಲ್ ರಾಹುಲ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇದೇ ವೇಳೆ ಕೊರೊನಾ ಲಾಕ್‍ಡೌನ್ ಬಳಿಕ ಆರಂಭವಾದ ಐಪಿಎಲ್ ಟೂರ್ನಿಯ ಕುರಿತು ಮಾತನಾಡಿರುವ ಕೆಎಲ್ ರಾಹುಲ್, ಟೂರ್ನಿಗೆ ಬರುವ ಸಂದರ್ಭದಲ್ಲಿ ನಾನು ನರ್ವಸ್ ಆಗಿದ್ದೆ. ಗಾಯದ ಉದ್ದೇಶದಿಂದ ಹೆದರುತ್ತಿದ್ದೆ, ಆ ಭಯ ಯಾವಾಗಲೂ ಇರುತ್ತದೆ. ದೀರ್ಘ ಸಮಯದವರೆಗೂ ಕ್ರಿಕೆಟ್‍ನಿಂದ ದೂರ ಉಳಿದ ಕಾರಣ ನನ್ನ ಕೌಶಲ್ಯಗಳ ಬಗ್ಗೆ ಸ್ವಲ್ಪ ಸಂದೇಹವಿತ್ತು. ಆದರೆ ಈಗ ತುಂಬಾ ಸಂತೋಷದಿಂದ ಟೂರ್ನಿಯನ್ನು ಎದುರಿಸುತ್ತಿದ್ದೇನೆ. ಟೂರ್ನಿ ಆರಂಭವಾದ ಬಳಿಕ ಎಲ್ಲಾ ಸಂದೇಹಗಳು, ಭಯ ದೂರವಾಯಿತು. ನೀವು ನಮ್ಮೊಂದಿಗೆ ಬರಲು ಪ್ರಾರಂಭಿಸಿದ ಬಳಿಕ ಎಲ್ಲಾ ಭಯವೂ ದೂರವಾಗಲು ಪ್ರಾರಂಭಿಸಿತ್ತು.
ಮಹಿ ಭಾಯ್ ಹಾಗೂ ನಿಮ್ಮಿಂದ ಆರಂಭದಿಂದಲೂ ಸಾಕಷ್ಟು ಕಲಿತ್ತಿದ್ದೇನೆ. ನಿಮ್ಮಿಂದ ಕಲಿತ ವಿಚಾರಗಳನ್ನು ಮೊದಲ ಬಾರಿಗೆ ಪ್ರಯೋಗ ಮಾಡಲು ಆರಂಭಿಸಿದ್ದು, ಗೆಲುವು ಮತ್ತು ಸೋಲುಗಳನ್ನು ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ತಂಡದ ಆಟಗಾರರೆಲ್ಲರೂ ಆಟವನ್ನು ಆನಂದಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಅವಕಾಶ ನನ್ನ ಕಲಿಕೆಗೆ ಬಹಳ ಸಹಾಯಕವಾಗಿದೆ. ನಾಯಕತ್ವ ವಹಿಸಿಕೊಳ್ಳುವುದು ನಮ್ಮ ವ್ಯಕ್ತಿತ್ವವನ್ನು ವೇಗವಾಗಿ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಐಪಿಎಲ್‍ನಲ್ಲಿ ಕೆಎಲ್ ರಾಹುಲ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನು ಆಡಿರುವ ಪಂಜಾಬ್ ತಂಡ ಕೇವಲ ಒಂದು ಗೆಲುವನ್ನು ಮಾತ್ರ ಪಡೆದುಕೊಂಡಿದೆ. ಸತತ ಸೋಲುಗಳನ್ನು ಎದುರಿಸಿ ಕೇವಲ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನವನ್ನು ಪಡೆದುಕೊಂಡಿದೆ.