– ಪ್ರಧಾನಿ ಮೋದಿಗೆ ರೈತರಿಗಿಂತ ಉದ್ದಿಮೆದಾರರ ಹಿತ ಮುಖ್ಯ
ಉಡುಪಿ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿರುವುದರಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನ ಮತ್ತೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ ಸೊರಕೆ ವಿಶ್ವಾಸ ವ್ಯಕ್ತಪಡಿಸಿದರು.
ಗಾಂಧಿ ಜಯಂತಿ ಪ್ರಯುಕ್ತ ಕಾಂಗ್ರೆಸ್ ಕಚೇರಿಯಲ್ಲಿ ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಂಘಟಿತರಾದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಪ್ರತಿಭಟನಾ ರ್ಯಾಲಿ ನಡೆಸಿದರು. ಕೇಂದ್ರ ಸರಕಾರದ ಜನವಿರೋಧಿ ಮತ್ತು ರೈತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
Advertisement
Advertisement
ಈ ವೇಳೆ ಮಾತನಾಡಿದ ಸೊರಕೆ, ರೈತರನ್ನು ದಮನ ಮಾಡುವ ಉದ್ದೇಶದಿಂದ ಉದ್ದಿಮೆದಾರರ ಪರವಾಗಿ ರೈತ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ನರೇಂದ್ರ ಮೋದಿ ಸರ್ಕಾರಕ್ಕೆ ಈ ದೇಶದ ಬೆನ್ನೆಲುಬು ರೈತಾಪಿ ವರ್ಗದ ಹಿತ ಮುಖ್ಯ ಅಲ್ಲ. ಕಳೆದ ಆರು ವರ್ಷಗಳಿಂದಲೂ ಕೂಡ ರೈತ ವಿರೋಧಿಯಾಗಿಯೇ ಸರ್ಕಾರ ನಡೆದುಕೊಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಕೇಂದ್ರ ಸರ್ಕಾರದ ಅಜಾಗರೂಕತೆಯಿಂದ ವಿಶ್ವದಲ್ಲಿ ಭಾರತ ಕರೋನಾದಲ್ಲಿ ನಂಬರ್ 1 ಹಂತದಲ್ಲಿದೆ. ಹೀಗಾಗಿ ಜನ ರೋಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
Advertisement
ಬ್ರಹ್ಮಗಿರಿ ಕಾಂಗ್ರೆಸ್ ಭವನದಿಂದ ಹುತಾತ್ಮ ಸ್ಮಾರಕದ ವರೆಗೆ ಕಾಂಗ್ರೆಸ್ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಸಾಗಿ ಘೋಷಣೆಗಳನ್ನು ಕೂಗಿದರು. ಉತ್ತರ ಪ್ರದೇಶದ ದಲಿತ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ಪ್ರತಿಭಟನಾಕಾರರು ಕಟುವಾದ ಮಾತುಗಳಲ್ಲಿ ಖಂಡಿಸಿದರು. ಅಲ್ಲದೆ ಕೊರೊನಾ ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ವಿಶ್ವಗುರು ಸ್ಥಾನದಲ್ಲಿರಬೇಕಾಗಿದ್ದ ಭಾರತ ಇಂದು ಕೊರೊನಾ ಪೀಡಿತರ ಸಂಖ್ಯೆಯಲ್ಲಿ ನಂಬರ್ 1 ಆಗಿರುವುದು ದುರಂತ ಎಂದು ಇದೇ ವೇಳೆ ಕಿಡಿಕಾರಿದರು.