ಚೆನ್ನೈ: ಡೆಲ್ಲಿ ತಂಡವನ್ನು ಎಷ್ಟೇ ಕಟ್ಟಿಹಾಕಲು ಯತ್ನಿಸಿದರೂ ಮುಂಬೈ ತಂಡಕ್ಕೆ ಸಾಧ್ಯವಾಗಿಲ್ಲ. ಸ್ಪಿನ್ನರ್ ಅಮಿತ್ ಮಿಶ್ರಾ ಬಾಲಿಂಗ್ ದಾಳಿ ಹಾಗೂ ಶಿಖರ್ ಧವನ್, ಸ್ಟೀವನ್ ಸ್ಮಿತ್ ತಾಳ್ಮೆಯಾಟದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳ ಜಯವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ಭಾರೀ ರನ್‍ಗಳ ಮೊತ್ತದ ನಿರೀಕ್ಷೆಯಲ್ಲಿತ್ತು. ಆದರೆ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ (24ಕ್ಕೆ 4) ಸ್ಪಿನ್ ದಾಳಿಗೆ ನಲುಗಿ ಇನಿಂಗ್ಸ್ ಮಧ್ಯದಲ್ಲಿ ಸತತ ವಿಕೆಟ್ ಕಳೆದುಕೊಂಡ ಪರಿಣಾಮ 20 ಓವರ್ ಗಳಲ್ಲಿ 9 ವಿಕೆಟ್‍ಗೆ 137 ರನ್‍ಗಳ ಸಾಧಾರಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು. 138 ರನ್‍ಗಳ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಇನ್ನೂ 5 ಎಸೆತ ಇರುವಾಗಲೇ 4 ವಿಕೆಟ್ ನಷ್ಟಕ್ಕೆ 138 ರನ್ ಗಳಿಸುವ ಮೂಲಕ ವಿಜಯಿಯಾಗಿದೆ.
Advertisement
Advertisement
ಡೆಲ್ಲಿ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಸ್ಟೀವ್ ಸ್ಮಿತ್, ಬಂದಷ್ಟೇ ವೇಗವಾಗಿ ಪೃಥ್ವಿ ಶಾ 7 ರನ್ (5 ಎಸೆತ, 1 ಬೌಂಡರಿ) ಸಿಡಿಸಿ ಮೊದಲ ಓವರ್‍ನ 3ನೇ ಬಾಲ್‍ಗೆ ಕ್ಯಾಚ್ ನೀಡಿದರು. ಈ ಮೂಲಕ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದರು. ತಾಳ್ಮೆಯ ಆಟವಾಡಲು ಮುಂದಾದ ಸ್ಮಿತ್, 33 ರನ್ (29 ಎಸೆತ, 4 ಬೌಂಡರಿ) ಚಚ್ಚಿ 9.2ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು.
Advertisement
ಸ್ಕೋರ್ ಕಡಿಮೆ ಇದ್ದಿದ್ದರಿಂದ ಶಿಖರ್ ಧವನ್ ಸಹ ವಿಕೆಟ್ ಕಾಯ್ದುಕೊಂಡು ನಿಧಾನವಾಗಿ ಆಟವಾಡಿದರು. 45 ರನ್ (42 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ 14ನೇ ಓವರ್ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಧವನ್ ಅರ್ಧ ಶತಕ ವಂಚಿತರಾಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆಯುಂಟುಮಾಡಿದರು.
Advertisement
ತಂಡದ ನಾಯಕ ರಿಷಭ್ ಪಂತ್ ಸಹ 7 ರನ್ (8 ಎಸೆತ, 1 ಬೌಂಡರಿ) ಹೊಡೆದು 16ನೇ ಓವರ್ ಮುಕ್ತಾಯದ ವೇಳೆ ವಿಕೆಟ್ ಒಪ್ಪಿಸಿದರು. ನಂತರ ಶಿಮ್ರಾನ್ ಹೆಟ್ಮಾಯೆರ್ ಹಾಗೂ ಲಲಿತ್ ಯಾದವ್ ತಾಳ್ಮೆಯ ಜೊತೆಯಾಟವಾಡಿ ಸಿಂಗಲ್ ರನ್ ತೆಗೆಯುತ್ತಲೇ ನಿಧಾನವಾಗಿ ಪಂದ್ಯವನ್ನು ದಡ ಸೇರಿಸಿದರು.
ಕೊನೆಗೆ ಶಿಮ್ರಾನ್ ಹೆಟ್ಮಾಯೆರ್ ಒಂದು ಬೌಂಡರಿ ಬಾರಿಸಿದರು, ಒಂದು ರನ್ ಉಳಿದಾಗ ಪೊಲಾರ್ಡ್ ನೋ ಬಾಲ್ ಎಸೆಯುವ ಮೂಲಕ ಡೆಲ್ಲಿಗೆ ಜಯ ತಂದುಕೊಟ್ಟರು. ಲಲಿತ್ ಯಾದವ್ ಔಟಾಗದೆ 22 ರನ್ (25 ಎಸೆತ, 1 ಬೌಂಡರಿ) ಹಾಗೂ ಶಿಮ್ರಾನ್ ಹೆಟ್ಮಾಯೆರ್ 14 ರನ್ (9 ಎಸೆತ, 2 ಬೌಂಡರಿ) ಸಿಡಿಸಿ ಪಂದ್ಯವನ್ನು ಗೆಲ್ಲಿಸಿದರು.
ಕಡಿಮೆ ಸ್ಕೋರ್ ಇದ್ದರೂ ಈ ಹಿಂದಿನ ಪಂದ್ಯದಂತೆ ಡೆಲ್ಲಿ ತಂಡವನ್ನು ಮುಂಬೈ ಕಟ್ಟಿ ಹಾಕಲು ಇನ್ನಿಲ್ಲದ ಪ್ರಯತ್ನ ನಡೆಸಿತು. ಆದರೆ ಡೆಲ್ಲಿ ಬ್ಯಾಟ್ಸ್ ಮೆನ್‍ಗಳ ತಾಳ್ಮೆಯ ಆಟದ ಫಲವಾಗಿ ಈ ಪ್ರಯತ್ನ ಸಫಲವಾಗಲಿಲ್ಲ.
ಮುಂಬೈ ಪರವಾಗಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕ್ವಿಂಟನ್ ಡಿ’ಕಾಕ್ ಹಾಗೂ ತಂಡದ ನಾಯಕ ರೋಹಿತ್ ಶರ್ಮಾ, ವಿಕೆಟ್ ಕಾಯ್ದುಕೊಂಡು ನಿಧಾನವಾಗಿ ಆಡಲು ಯತ್ನಿಸಿದರು. ಆದರೆ 2ನೇ ಓವರ್‍ನಲ್ಲಿ ಮೊದಲ ಬಾಲ್‍ಗೆ ಕ್ವಿಂಟನ್ ಡಿ’ಕಾಕ್ ಕೇವಲ 2 ರನ್(4 ಎಸೆತ) ಹೊಡೆದು ವಿಕೆಟ್ ಒಪ್ಪಿಸಿದರು. ಈ ಮೂಲಕ ಆರಂಭದ ಹಂತದಲ್ಲೇ ತಂಡಕ್ಕೆ ಆಘಾತವನ್ನುಂಟುಮಾಡಿದರು.
ರೋಹಿತ್ ಶರ್ಮಾ ಜೊತೆಯಾದ ಸೂರ್ಯಕುಮಾರ್ ಯಾದವ್, ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಹೆಚ್ಚು ಕಾಲ ನಿಲ್ಲಲಿಲ್ಲ 6ನೇ ಓವರ್ ಕೊನೆಯಲ್ಲಿ 24 ರನ್(15 ಎಸೆತ, 4 ಬೌಂಡರಿ) ಸಿಡಿಸಿ ಕ್ಯಾಚ್ ನೀಡಿದರು.
ವಿಕೆಟ್ ಕಾಯ್ದುಕೊಂಡು ಆಡುತ್ತಿದ್ದ ರೋಹಿತ್ ಶರ್ಮಾ 44 ರನ್(30 ಎಸೆತ, 3ಬೌಂಡರಿ, 3 ಸಿಕ್ಸ್) ಚಚ್ಚಿ 8.4ನೇ ಓವರ್‍ನಲ್ಲಿ ಕ್ಯಾಚ್ ನೀಡಿದರು. ಇದರಿಂದಾಗಿ ಉತ್ತಮ ಸ್ಕೋರ್ ನಿರೀಕ್ಷೆಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ಆಘಾತವಾಯಿತು. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇಬ್ಬರ ಜೊತೆಯಾಟದಲ್ಲಿ 29 ಎಸೆತಕ್ಕೆ 58 ಚಚ್ಚಿದ್ದರು. ಆದರೆ ಬೇಗ ವಿಕೆಟ್ ಕಳೆದುಕೊಂಡಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ತಂಡದ ಮೊತ್ತ ಹೆಚ್ಚಿಸಲು ಸಾಧ್ಯವಾಗಲಿಲ್ಲ.
ಇಶಾನ್ ಕಿಶನ್ ತಾಳ್ಮೆಯಾಟ ಆಡುವ ಮೂಲಕ ತಕ್ಕಮಟ್ಟಿಗೆ ತಂಡಕ್ಕೆ ರನ್‍ಗಳ ಕೊಡುಗೆ ನೀಡಿದರು. 26 ರನ್ (28 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ 17.3ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿದರು. ಜಯಂತ್ ಯಾದವ್ ಕಿಶನ್ ಸಹ ವಿಕೆಟ್ ಕಾಯ್ದುಕೊಂಡು ಆಟವಾಡಿದ್ದು, 23 ರನ್ (22 ಎಸೆತ, 1 ಬೌಂಡರಿ) ಗಳಿಸಿ 18ನೇ ಓವರ್ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು.
ರೋಹಿತ್ ಶರ್ಮಾ ಔಟಾಗುತ್ತಿದ್ದಂತೆ ಮುಂಬೈ ತಂಡದ ಬ್ಯಾಟ್ಸ್‍ಮನ್‍ಗಳು ನಿಧಾನಗತಿಯಲ್ಲಿ ಆಡ ತೊಡಗಿದರು. ಹಾರ್ದಿಕ್ ಪಾಂಡ್ಯ ಮೊದಲ ಬಾಲ್‍ಗೇ ಕ್ಯಾಚ್ ನೀಡಿ, ಸೊನ್ನೆ ಸುತ್ತಿದರೆ, ಕೃಣಾಲ್ ಪಾಂಡ್ಯ ಕೇವಲ 1 ರನ್ (5 ಎಸೆತ) ಹೊಡೆದು 10.4ನೇ ಓವರ್ ನಲ್ಲಿ ಪೆವಿಲಿಯನ್ ಸೇರಿದರು.
ಕೈರೊನ್ ಪೊಲಾರ್ಡ್ 2 ರನ್ (5 ಎಸೆತ) ಗಳಿಸಿ 11ನೇ ಓವರ್ ಕೊನೆಯಲ್ಲಿ ಔಟಾದರು. ರಾಹುಲ್ ಚಹರ್ ಸಹ 6 ರನ್ (6 ಎಸೆತ, 1 ಬೌಂಡರಿ) ಬಾರಿಸಿ 19.4ನೇ ಓವರ್‍ನಲ್ಲಿ ಕ್ಯಾಚ್ ನೀಡಿದರು. ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನದಿಂದಾಗಿ ತಂಡ 137 ರನ್‍ಗಳ ಅಲ್ಪ ಮೊತ್ತ ದಾಖಲಿಸುವಂತಾಯಿತು.