ನವದೆಹಲಿ: ನೈಋತ್ಯ ಮಾನ್ಸೂನ್ ಮಾರುತಗಳು ಇಂದು ಕೇರಳ ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಖಚಿತಪಡಿಸಿದೆ.
ಈ ಕುರಿತು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಮಾಹಿತಿ ನೀಡಿದ್ದು, ಎರಡು ದಿನಗಳು ತಡವಾದರೂ ಅಂತಿಮವಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಿವೆ. ಕೇರಳದ ದಕ್ಷಿಣ ಭಾಗಗಳಿಗೆ ನೈಋತ್ಯ ಮಾನ್ಸೂನ್ ಪ್ರವೇಶಿಸಿದೆ ಎಂದು ಮೋಹಪಾತ್ರ ಅವರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಜೂನ್ 1ರಂದೇ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸುತ್ತಿದ್ದವು. ಆದರೆ ಈ ವರ್ಷ 2 ದಿನಗಳ ಕಾಲ ತಡವಾಗಿದೆ. ಕೇರಳ ಪ್ರವೇಶಿಸಿರುವ ಮಾನ್ಸೂನ್ ಮಾರುತಗಳು ಭಾರತದಲ್ಲಿ ನಾಲ್ಕು ತಿಂಗಳ ಕಾಲ ಸುಧೀರ್ಘ ಮಳೆಗಾಲದ ಆರಂಭವನ್ನು ಸೂಚಿಸುತ್ತವೆ ಎಂದು ಹೇಳಿದ್ದಾರೆ.
ಅರಬ್ಬಿ ಸಮುದ್ರ ದಕ್ಷಿಣ ಭಾಗ, ಲಕ್ಷದ್ವೀಪ ಪ್ರದೇಶ, ದಕ್ಷಿಣ ಕೇರಳ, ದಕ್ಷಿಣ ತಮಿಳುನಾಡು, ಕೊಮೊರಿನ್- ಮಾಲ್ಡೀವ್ಸ್ ನ ಕೆಲ ಭಾಗಗಳು ಹಾಗೂ ಬಂಗಾಳಕೊಲ್ಲಿಯ ನೈಋತ್ಯ ಭಾಗಗಳಲ್ಲಿ ಇಂದು ಮಳೆಯಾಗಲಿದೆ ಎಂದು ವಿವರಿಸಿದ್ದಾರೆ.
ಉಳಿದಂತೆ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡು, ಅರಬ್ಬಿ ಸಮುದ್ರದ ದಕ್ಷಿಣ ಹಾಗೂ ಮಧ್ಯ ಭಾಗ, ಕೇರಳ, ಲಕ್ಷದ್ವೀಪದ ಉಳಿದ ಭಾಗ, ತಮಿಳುನಾಡು ಹಾಗೂ ಪುದುಚೇರಿಯ ಕೆಲವು ಭಾಗಗಳು, ರಾಯಲ್‍ಸೀಮಾ, ಬಂಗಾಳ ಕೊಲ್ಲಿಯ ದಕ್ಷಿಣ ಹಾಗೂ ಮಧ್ಯ ಭಾಗಗಳಲ್ಲಿ ಮುಂದಿನ 2 ದಿನಗಳ ಕಾಲ ಮಾನ್ಸೂನ್ ಮಾರುತಗಳು ಮಳೆ ಸುರಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.
ಮೇ 31 ಅಂದರೆ ಸಾಮಾನ್ಯವಾಗಿ ಆರಂಭವಾಗುವ ದಿನಕ್ಕಿಂದ ಒಂದು ದಿನ ಮುಂಚಿತವಾಗಿಯೇ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಬಳಿಕ ನಾಲ್ಕು ದಿನಗಳು ಹೆಚ್ಚೂಕಡಿಮೆ ಆಗಬಹುದು ಎಂದಿತ್ತು. ಅಲ್ಲದೆ ಈ ವರ್ಷ ನೈಋತ್ಯ ಮಾನ್ಸೂನ್ ಮಾರುತಗಳು ಸಾಮಾನ್ಯವಾಗಿರಲಿವೆ ಎಂದು ಸಹ ಈ ಹಿಂದೆ ತಿಳಿಸಿತ್ತು.