ಚಾಮರಾಜನಗರ: ಚಾಮರಾಜನಗರದ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರನ ಬೆಟ್ಟದಲ್ಲಿ ಈ ಬಾರಿ ಮಹಾ ಶಿವರಾತ್ರಿ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.
ಈ ಮುನ್ನ ಮಾರ್ಚ್ 10 ರಿಂದ 14 ರವರೆಗೆ ನಾಲ್ಕು ದಿನಗಳ ಕಾಲ ಜಾತ್ರೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ ನೆರೆಯ ರಾಜ್ಯ ಕೇರಳದಲ್ಲಿ ಈಗಾಗಲೇ ಕೊರೊನಾ ಪ್ರಕರಣ ಮತ್ತೆ ಹೆಚ್ಚಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಜಾತ್ರೆ ರದ್ದುಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ರಾಜ್ಯದ ಹೈಪವರ್ ಕಮಿಟಿ ಕೂಡ ಜಾತ್ರೆ ನಡೆಸದಂತೆ ಸೂಚನೆ ನೀಡಿದೆ.
ಇಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಿತು. ಈ ಸಭೆಯಲ್ಲಿ ಶಿವರಾತ್ರಿ ಜಾತ್ರೆ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಾದಪ್ಪನ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿತ್ತು. ಸುಮಾರು 4 ಲಕ್ಷಕ್ಕೂ ಹೆಚ್ಚು ಭಕ್ತರು ಮಾದಪ್ಪನ ದರ್ಶನ ಪಡೆದು ಹೋಗುತ್ತಿದ್ದರು. ಕೊರೊನಾ ಆತಂಕದ ಹಿನ್ನಲೆಯಲ್ಲಿ ಜಾತ್ರೆಯನ್ನು ರದ್ದುಗೊಳಿಸುವ ನಿರ್ಧಾರ ಮಾಡಲಾಗಿದೆ.
ಶಿವರಾತ್ರಿ ಜಾತ್ರೆಯನ್ನು ಸಾಂಪ್ರದಾಯಿಕವಾಗಿ ನಡೆಸಲು ನಿರ್ಧರಿಸಲಾಗಿದ್ದು, ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಥಳೀಯರಿಗಷ್ಟೇ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸ್ಥಳೀಯರು ಕೂಡ ದೇವರ ದರ್ಶನ ಪಡೆಯಬೇಕಾದರೆ ಗುರುತಿನ ಚೀಟಿ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಕೊರೊನಾ ಕಾರ್ಮೋಡದ ನಡುವೆಯೂ ಈ ಬಾರಿ ಸರಳ, ಸಾಂಪ್ರದಾಯಿಕವಾಗಿ ಪೂಜೆ, ಪುನಸ್ಕಾರಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.