ಬೆಳಗಾವಿ: ಮಾಜಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಲಹೆ ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯಡಿಯೂರಪ್ಪ ಡೋಂಗಿ ರಾಜಕಾರಣಿ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮಾಜಿ ಸಿಎಂ ಆಗಿ ಗೌರವಯುತವಾಗಿ ನಡೆದುಕೊಳ್ಳಬೇಕು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಮೂರು ಸಾವಿರ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಯೋಗ್ಯತೆ ಏನಿದೆ ಅಂತ ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಬದಲ್ಲಿ ಮನೆಗೆ ಹೋಗದೆ ಇರುವಾಗಲೇ ಗೊತ್ತಾಗಿತ್ತು. ನಮ್ಮ ರಾಜ್ಯದಲ್ಲಿ ವೀರಪ್ಪನ್ ನಂತಹ ಹತ್ತಾರು ಹಂತಕರನ್ನ ಕಂಡಿದ್ದೇವೆ. ಅದೇ ರೀತಿಯಲ್ಲಿ ಕಾಂಗ್ರೆಸ್ಸಿನವರು ಆಡಳಿತ ನಡೆಸಿದವರು ಎಂದು ವಾಗ್ದಾಳಿ ನಡೆಸಿದರು.
ಟಿಪ್ಪು ಜಯಂತಿ ಹೆಸರಲ್ಲಿ ಗಲಭೆ ಸೃಷ್ಟಿಸಿ, ಲಿಂಗಾಯತ ವೀರಶೈವ ಅಂತ ಸಮಾಜ ಒಡೆದರು. ಅಧಿಕಾರವನ್ನ ಉಳಿಸಬೇಕು ಅಂತ ಬ್ರಿಟಿಷರಿಗಿಂತ ಕಟ್ಟ ಕಡೆಯದಾಗಿ ಸಮಾಜವನ್ನ ಒಡೆದ ಮುಖ್ಯಮಂತ್ರಿ ಅಂದ್ರೆ ಅದು ಸಿದ್ದರಾಮಯ್ಯ. ಇಂತಹ ಕೆಟ್ಟ ಸಿಎಂ ಬೇಡವೆಂದು ಮೈಸೂರಿನಲ್ಲಿ ಮನೆಗೆ ಕಳುಹಿಸಿದ್ದಾರೆ. ಎಲ್ಲೇಲ್ಲೋ ನಿಂತು ಗೆಲ್ಲುವ ಪರಿಸ್ಥಿತಿ ಒಬ್ಬ ಮುಖ್ಯಮಂತ್ರಿ ಆಗಿದ್ದವರಿಗೆ ಬಂದಿದೆ. ಜನ ಅವರನ್ನು ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಮಾನ ಮರ್ಯಾದೆ ಇದ್ರೇ ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಹೇಳಿದ್ದೇನು..?
ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ಸೋಮವಾರ ರಾಜ್ಯದ ಹಲವೆಡೆ ಬಂದ್ ಮಾಡಲಾಗಿತ್ತು. ರೈತರ ಪ್ರತಿಭಟನೆಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ಒಬ್ಬ ಡೋಂಗಿ ರೈತ ನಾಯಕ. ನಾನು ರೈತ ನಾಯಕ ಎಂದು ಸುಮ್ನೆ ನಾಟಕ ಮಾಡುತ್ತಿದ್ದಾರೆ. ಶೇ.80 ರಷ್ಟು ರೈತರು ಸಣ್ಣ ಹಿಡುವಳಿದಾರರು ಇದ್ದಾರೆ. ಅವರೆಲ್ಲಾ ಕಾರ್ಮಿಕರಾಗಿ ಕೆಲಸ ಮಾಡುವ ಪರಿಸ್ಥಿತಿ ಉದ್ಭವವಾಗುತ್ತೆ. ಹಸಿರು ಶಾಲು ಹಾಕಿಕೊಂಡು ತಕ್ಷಣ ಯಡಿಯೂರಪ್ಪ ರೈತರು ಆಗಲ್ಲ. ನಾವು ಉಳುವವರೇ ಭೂಮಿ ಒಡೆಯ ಎಂದು ಮಾಡಿದ್ದೇವೆ. ಬಿಜೆಪಿಯವರು ಉಳ್ಳವನೇ ಭೂಮಿ ಒಡೆಯ ಎಂದು ಮಾಡಲು ಹೊರಟಿದ್ದಾರೆ. ರೈತರು ಈ ಕಾಯ್ದೆ ತನ್ನಿ ಎಂದು ಹೇಳಿಲ್ಲ. ತರಾತುರಿಯಲ್ಲಿ ತಿದ್ದುಪಡಿ ಕಾಯ್ದೆಗೆ ಸುಗ್ರಿವಾಜ್ಞೆ ತಂದಿದ್ದಾರೆ. ದುಡ್ಡಿಗಾಗಿ ಸುಗ್ರಿವಾಜ್ಞೆ ಮಾಡಿದ್ದಾರೆ. ಯಡಿಯೂರಪ್ಪ ಅವರೇ ಇನ್ನೆಷ್ಟು ಲೂಟಿ ಹೊಡೆಯುತ್ತೀರಾ ನೀವು ಎಂದು ಪ್ರಶ್ನಿಸಿದ್ದರು.