– ಧುಮ್ಮಿಕ್ಕಿ ಹರಿಯುತ್ತಿದೆ ಜೋಗ ಜಲಪಾತ
– ಜೋಗದ ವೈಯ್ಯಾರ ಸವಿಯಲು ಪ್ರವಾಸಿಗರೇ ಇಲ್ಲ
ಶಿವಮೊಗ್ಗ: ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮುಂಗಾರಿನ ಆರ್ಭಟಕ್ಕೆ, ಜಲಧಾರೆಗಳು ಮೈತುಂಬಿಕೊಳ್ಳುತ್ತಿವೆ. ಆದರೆ ಲಾಕ್‍ಡೌನ್ ಹಿನ್ನೆಲೆ ಪ್ರವಾಸಿಗರಿಲ್ಲದೇ, ತಾಣಗಳು ಭಣಗುಡುತ್ತಿವೆ. ಇತ್ತ ಯಾವುದರ ಪರಿವೇ ಇಲ್ಲದೆ, ಜೋಗ ಜಲಪಾತ ಧುಮ್ಮಿಕ್ಕಿ ಹರಿಯುವ ಮೂಲಕ ಪ್ರಕೃತಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ.
ಹಸಿರು ವನರಾಶಿಯ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜೋಗ ಜಲಪಾತದ ಸೊಬಗಿಗೆ, ಮುಂಗಾರಿನ ಸಿಂಚನ ಟಚ್ ನೀಡಿದೆ. ಜಿಲ್ಲೆಯ ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗ ಜಲಪಾತ ಮೆಲ್ಲ-ಮೆಲ್ಲನೆ ಭೂರಮೆಗೆ ಮೈ ಒಡ್ಡಿಕೊಳ್ಳುತ್ತಿದೆ. ವರುಣನನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತ, ತನ್ನ ಒಡಲನ್ನು ಭರ್ತಿಮಾಡಿಕೊಳ್ಳುತ್ತಿದೆ.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಜೂನ್, ಜುಲೈ ತಿಂಗಳು ಪ್ರವಾಸಿಗರ ಪಾಲಿಗೆ ಜೋಗ ಜಲಪಾತ ಸ್ವರ್ಗಕ್ಕೆ ಸಮಾನ. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಜೋಗದ ವೈಭೋಗವನ್ನು ಕಣ್ತುಂಬಿ ಕೊಳ್ಳುತ್ತಿದ್ದರು. ಮುಂಗಾರು ಮಳೆಯ ನಡುವೆ, ಚುಮು-ಚುಮು ಚಳಿಯಲಿ, ತುಂತುರು ಮಳೆಯಲಿ, ಮೋಡಗಳ ಜಾತ್ರೆಯಲಿ ಹಸಿರ ವನಸಿರಿಯ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ಸವಿಯುತ್ತಿದ್ದರು. ಆದರೆ ಲಾಕ್‍ಡೌನ್ ನಿಂದಾಗಿ ಈ ಬಾರಿ ಪ್ರವಾಸಿಗರೇ ಇಲ್ಲದಂತಾಗಿದೆ.