– ಒಂದೂವರೆ ತಿಂಗಳ ಹಿಂದೆ ಪ್ರೀತಿಸಿ ಮದ್ವೆ
– ಯುವತಿ ಅಣ್ಣಂದಿರಿಂದ ಕೊಲೆ
ಚಂಡೀಗಢ: ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರೋ ಘಟನೆ ಶುಕ್ರವಾರ ತಡರಾತ್ರಿ ಪಾಣಿಪತ್ ನಗರದ ಭಾವನಾ ಚೌಕ್ ನಲ್ಲಿ ನಡೆದಿದೆ. ಮೃತ ಯುವಕನಿಗೆ 12 ಬಾರಿ ಹರಿತವಾದ ಆಯುಧದಿಂದ ಇರಿಯಲಾಗಿದೆ.
23 ವರ್ಷದ ನೀರಜ್ ಕೊಲೆಯಾದ ಯುವಕ. ಸೇಲ್ಸ್ ಮ್ಯಾನ್ ಆಗಿದ್ದ ನೀರಜ್ ಒಂದೂವರೆ ತಿಂಗಳ ಹಿಂದೆ ಪಕ್ಕದ್ಮನೆ ಯುವತಿ ಕೋಮಲಾಳನ್ನ ಪ್ರೀತಿಸಿ ಮದುವೆಯಾಗಿದ್ದನು. ಇಬ್ಬರ ಜಾತಿ ಬೇರೆ ಆಗಿದ್ದರಿಂದ ಕೋಮಲಾ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬದ ವಿರೋಧದ ನಡುವೆಯೂ ಪಾಣೀಪತ್ ನ್ಯಾಯಾಲಯದಲ್ಲಿ ಇಬ್ಬರ ಮದುವೆ ನಡೆದಿತ್ತು. ಮದುವೆ ಬಳಿಕ ದಂಪತಿ ಎಸ್.ಪಿ. ಕಚೇರಿಗೆ ತೆರಳಿ ಜೀವಕ್ಕೆ ಅಪಾಯವಿದ್ದು, ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.
ಕೋಮಲಾಳ ತಂದೆ ಕಶ್ಮೀರ್ ಸಿಂಗ್ ಮತ್ತು ಸೋದರರಾದ ಅಜಯ್, ವಿಜಯ್ ಸಮಾಜದಲ್ಲಿ ತಮ್ಮ ಗೌರವಕ್ಕೆ ಧಕ್ಕೆ ಆಗಿದೆಯೆಂದು ಕೋಪಗೊಂಡಿದ್ದರು. ಒಂದೆರಡು ಬಾರಿ ನೀರಜ್ ಮೇಲೆ ಹಲ್ಲೆ ನಡೆಸಿದ್ದರು. ಅಜಯ್, ವಿಜಯ್ ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಫೋನ್ ಮಾಡಿ ನೀರಜ್ ನನ್ನು ಕರೆಸಿಕೊಂಡಿದ್ದಾರೆ. ಮತ್ತೆ ಮೂವರ ಮಧ್ಯೆ ಜಗಳ ನಡೆದಿದ್ದು, ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಆರೋಪಿಗಳನ್ನ ಗುರುತಿಸಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನೀರಜ್ ಸೋದರ ಜಗದೀಶ್, ನಾಲ್ವರು ಸೋದರರಲ್ಲಿ ನೀರಜ್ ಮೂರನೇಯವನು. ಆರೋಪಿಗಳು ಈ ಹಿಂದೆಯೂ ಆತನ ಮೇಲೆ ದಾಳಿ ನಡೆಸಿದ್ದರು. ಘಟನೆ ಸಂಬಂಧ ದೂರು ಸಹ ನೀಡಲಾಗಿತ್ತು. ಕೋಮಲಾಳ ಪೋಷಕರೇ ಕೊಲೆ ಮಾಡಿದ್ದು, ಅವರನ್ನ ಬಂಧಿಸಿ ಎಂದು ಆಗ್ರಹಿಸಿದ್ದಾರೆ.