ಕಾರವಾರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನಕ್ಕೆ ಬಂದಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಮಾನಸಿಕ ಅಸ್ವಸ್ಥ ಎಂದು ಆರೋಪಿಯನ್ನು ಪೊಲೀಸರು ಬಿಟ್ಟು ಕಳಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ರಾಯಲ್ ಕೇರಿಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ್ದ ಕಳ್ಳ ಮನೆಯ ಒಳಗೆ ನುಗ್ಗಿದ್ದು, ಈ ವೇಳೆ ಜನರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಆತನ ಚೀಲದಲ್ಲಿ ಚಾಕು, ಬೀಗ ತೆರೆಯಲು ಬಳಸುತಿದ್ದ ಕೀಲಿ ಕೈ ಗೊಂಚಲುಗಳು ದೊರೆತಿದ್ದು, ಈತ ಉಡುಪಿಯ ಬ್ರಹ್ಮಾವರದವನು ಎಂದು ತಿಳಿದುಬಂದಿದೆ. ಸ್ಥಳೀಯರು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಂತರ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದು, ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಆರೋಪಿ ತನ್ನ ಹೆಸರನ್ನು ಹೇಳಿಲ್ಲ. ಅಲ್ಲದೆ ವಿಚಿತ್ರವಾಗಿ ವರ್ತಿಸಿದ್ದ. ಹೀಗಾಗಿ ಹೆಚ್ಚಿನ ತನಿಖೆಗಾಗಿ ಹೊನ್ನಾವರ ಠಾಣೆಗೆ ಕರೆದೊಯ್ಯಲಾಗಿತ್ತು.
ಆರೋಪಿಯನ್ನು ಬಿಟ್ಟು ಕಳುಹಿಸಿದ ಪೊಲೀಸರು!
ಮನೆ ಕಳ್ಳತನಕ್ಕೆ ಬಂದು ರೆಡ್ ಹ್ಯಾಂಡ್ ಆಗಿ ಸಿಕ್ಕ ಈ ಕಳ್ಳನನ್ನು ಹೊನ್ನಾವರ ಪೊಲೀಸರು ಹೆಚ್ಚಿನ ತನಿಖೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ಆತ ತನ್ನ ಹೆಸರು ಹೇಳದೆ ವಿಚಿತ್ರವಾಗಿ ವರ್ತಿಸಿದ್ದಾನೆ. ಸಾರ್ವಜನಿಕರು ಕಳ್ಳನನ್ನು ಹಿಡಿದುಕೊಟ್ಟಿರುವುದು ಬಿಟ್ಟರೆ ಕಳ್ಳತನಕ್ಕೆ ಬಂದ ಮನೆಯಲ್ಲಿ ಯಾರೂ ಇಲ್ಲದಿರುವುದು ಹಾಗೂ ದೂರು ನೀಡದ ಹಿನ್ನಲೆಯಲ್ಲಿ ತಮಗೇಕೆ ತಲೆಬಿಸಿ ಎನ್ನುವ ವರೆಸೆಯಿಂದ ಹೊನ್ನಾವರ ಠಾಣೆಯ ಪೊಲೀಸರು ಆತನನ್ನು ಬಿಟ್ಟು ಕಳುಹಿಸಿದ್ದಾರೆ.
ಈ ಬಗ್ಗೆ ರಾಯಲ್ ಕೇರಿಯ ಜನ ವಿಚಾರಿಸಿದಾಗ ಆತ ಚನ್ನಾಗಿಯೇ ಇದ್ದರೂ, ಮಾನಸಿಕ ಅಸ್ವಸ್ಥನಾಗಿದ್ದ ಹೀಗಾಗಿ ಬಿಟ್ಟು ಕಳುಹಿಸಿರುವುದಾಗಿ ಪೊಲೀಸರು ಸಬೂಬು ಹೇಳಿದ್ದಾರೆ. ಇದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ.