ಮಡಿಕೇರಿ: ಸತತ ಆರು ದಿನಗಳ ನಂತರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಕಾರ್ಯಾಚರಣೆಯಲ್ಲಿ ಪ್ರಪಾತದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ.
ಮಣ್ಣಿನಡಿ ಸಿಲುಕಿದ್ದ ಮತ್ತೊಂದು ಮೃತ ದೇಹ ಪತ್ತೆಯಾಗಿದ್ದು, ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತಿಸಲಾಗಿದೆ. ಕಂದಕದ ಕೆಳಗಿರುವ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಿಯ ಸರ್ಕಲ್ ಇನ್ಸ್‌ಪೆಕ್ಟರ್ ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತು ಪತ್ತೆ ಮಾಡಿದ್ದಾರೆ.
ನಾರಾಯಣಾಚಾರ್ ಆಚಾರ್ಯ ಮೃತದೇಹ ಮನೆಯಿಂದ ಅರ್ಧ ಕಿ.ಮೀ ದೂರಕ್ಕೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಪ್ರಪಾತದಲ್ಲಿ ಶವ ಪತ್ತೆಯಾಗಿದೆ. ಸಿಬ್ಬಂದಿ ಮೃತದೇಹ ಹೊರತೆಗೆದು ಮೇಲಕ್ಕೆ ತರುತ್ತಿದ್ದಾರೆ. ಇತ್ತ ಆಪರೇಷನ್ ಬ್ರಹ್ಮಗಿರಿ ನಡೆಯುತ್ತಿರುವ ಸ್ಥಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಇಂದು ಬೆಳಗ್ಗೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಮತ್ತು ಓಮ್ನಿ ಎರಡು ಕಾರುಗಳು ಪತ್ತೆಯಾಗಿದ್ದವು. ಜೊತೆಗೆ ಒಂದು ಬೈಕ್ ಮತ್ತು ನಾಯಿಯ ಮೃತದೇಹ ಪತ್ತೆಯಾಗಿತ್ತು. ಎರಡು ಕಾರುಗಳು ಸಂಪೂರ್ಣ ನುಜ್ಜು-ಗುಜ್ಜಾಗಿದ್ದವು.