ಮಡಿಕೇರಿ: ಕೊಡಗಿನ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿಯಲ್ಲಿ ಗುಡ್ ಫ್ರೈಡೆಯಂದು ರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಏಳು ಜನರ ಹತ್ಯೆಗೆ ಕಾರಣನಾಗಿದ್ದ ಆರೋಪಿಯ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.
ಬೋಜ(55) ಮೃತ ವ್ಯಕ್ತಿಯಾಗಿದ್ದಾನೆ. ಮನೆಯಗೆ ಬೆಂಕಿ ಇಟ್ಟು 7 ಮಂದಿ ಸಾವಿಗೆ ಕಾರಣನಾಗಿದ್ದ ಆರೋಪಿ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಈತನ ಮೃತದೇಹ ಇಂದು ಮುಂಜಾನೆ ಆತನಿದ್ದ ಲೈನ್ ಮನೆಯ ಸಮೀಪದ ಕಾಫಿ ತೋಟದಲ್ಲಿ (ಮುಗುಟಗೇರಿ) ಪತ್ತೆಯಾಗಿದೆ.
ಬೋಜ ಬೆಂಕಿ ಇಟ್ಟ ದಿನವೇ ತನ್ನ ಇನ್ನೊಂದು ಮಗಳಿಗೆ ಕರೆ ಮಾಡಿ ಮನೆಗೆ ಬೆಂಕಿ ಹಾಕಿರುವ ಬಗ್ಗೆ ಮಾತನಾಡಿರುವ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಕರೆ ಮಾಡಿದ ಮರುಕ್ಷಣವೇ ಬೋಜ ಲೈನ್ ಮನೆಯ ಸಮೀಪವೇ ಆತ್ಮಹತ್ಯೆಗೆ ಶರಣಾಗಿರುವ ಸಂಶಯ ಇದೀಗ ವ್ಯಕ್ತವಾಗಿದೆ.
ನಾಲ್ಕು ಪುಟ್ಟ ಮಕ್ಕಳು ಸೇರಿದಂತೆ ಒಟ್ಟು ಏಳು ಜನರನ್ನು ಬಲಿ ತೆಗೆದುಕೊಂಡ ಆರೋಪಿಯ ಶವ ಇಂದು ಮುಗುಟಗೇರಿಯಲ್ಲಿ ಸಿಕ್ಕಿದೆ. ಮೈಸೂರಿನಲ್ಲಿ ಈತನಿಂದ ಅಮಾನವೀಯವಾಗಿ ಬೆಂಕಿಗೆ ಆಹುತಿಯಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ಭಾಗ್ಯ(28) ಇಂದು ಮುಂಜಾನೆ ಕೊನೆಯುಸಿರು ಎಳೆದಿದ್ದಾರೆ.
ಇಬ್ಬರು ಮಕ್ಕಳನ್ನು ಕಳೆದುಕೊಂಡ ಭಾಗ್ಯ ಗಾಯಾಳು ತೋಲ ಎಂಬವರ ಪತ್ನಿಯಾಗಿದ್ದಾರೆ. ಈ ಮೂಲಕ ಒಟ್ಟು 7 ಜನರ ಹತ್ಯೆಗೆ ಕಾರಣನಾಗಿದ್ದ ಬೋಜನ ಹುಡುಕಾಟಕ್ಕೆ ಕೊಡಗಿನ ಪೊಲೀಸರ ವಿಶೇಷ ತಂಡ ರಚನೆ ಮಾಡಿ ಅರೋಪಿ ಬೋಜನ ಹುಡುಕಾಟ ನಡೆಸುತ್ತಿದ್ದರು. ಇದೀಗ ಪೊಲೀಸರಿಗೆ ಮೃತದೇಹ ಪತ್ತೆಯಾಗುವ ಮೂಲಕ ಬೋಜ ಆತ್ಮಹತ್ಯೆ ಮಾಡಿಕೊಂಡು ಬೆಂಕಿ ಹಾಕಿದ ಪ್ರಕರಣಕ್ಕೆ ಪೊನ್ನಂಪೇಟೆ ಪೊಲೀಸರಿಗೆ ತನಿಖೆಗೆ ತೆರೆಬಿದ್ದಿದೆ.